ಪತಿಯ ಮರಣ ಪ್ರಮಾಣಪತ್ರವನ್ನು ನೀಡಲು ಗ್ರಾಮೀಣಾಭಿವೃದ್ಧಿ ಅಧಿಕಾರಿ 10 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ತನಗೆ ಜಾತಿ ನಿಂದನೆ ಮಾಡಿದ್ದು ಮಾತ್ರವಲ್ಲದೇ ಸುಳ್ಳು ಕೇಸ್ನಲ್ಲಿ ಸಿಲುಕಿಸೋದಾಗಿ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಳೆ.
ದೂರುದಾರ ಮಹಿಳೆ ಆರತಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ನಯಾಗಾಂವ್ನ ನಿವಾಸಿಯಾಗಿದ್ದಾಳೆ. ಈಕೆ ಪೊಲೀಸರಿಗೆ ನೀಡಿದ ದೂರಿನಲ್ಲಿ, ತನ್ನ ಪತಿ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮೃತಪಟ್ಟಿದ್ದರು. ಪತಿಯ ಮರಣ ಪ್ರಮಾಣ ಪತ್ರವನ್ನು ನೀಡುವ ವೇಳೆ ಗ್ರಾಮೀಣಾಭಿವೃದ್ಧಿ ಇಲಾಖೆ ಅಧಿಕಾರಿ 10 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಲಂಚಕ್ಕೆ ಬೇಡಿಕೆ ಇಟ್ಟಿರುವುದು ಮಾತ್ರವಲ್ಲದೇ ಗ್ರಾಮೀಣಾಭಿವೃದ್ಧಿ ಅಧಿಕಾರಿಯು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮಾತ್ರವಲ್ಲದೇ ಸುಳ್ಳು ಕೇಸಿನಲ್ಲಿ ಸಿಲುಕಿಸೋದಾಗಿ ಬೆದರಿಕೆ ಹಾಕಿದ್ದಾರೆ . ಅಲ್ಲದೇ ನನ್ನ ವಿರುದ್ಧ ಜಾತಿ ನಿಂದನನೆಯನ್ನು ಮಾಡಲಾಗಿದೆ. ನಾನು ಅಧಿಕಾರಿಗೆ 5000 ರೂ ಹಣವನ್ನು ನೀಡಿದ್ದೆ. ಆದರೆ ಅವರು ಮರಣ ಪ್ರಮಾಣ ಪತ್ರ ನೀಡಲು ನಿರಾಕರಿಸಿದರು. ಉಳಿದ ಮೊತ್ತವನ್ನು ನೀಡಲೇಬೇಕೆಂದು ಪೀಡಿಸುತ್ತಿದ್ದರು ಎಂದು ಆರತಿ ಹೇಳಿದ್ದಾರೆ.