ಲಖ್ನೋ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿರುವ ಇಫ್ಕೋ ರಸಗೊಬ್ಬರ ಕಾರ್ಖಾನೆಯಲ್ಲಿ ಭಾರಿ ಅನಿಲ ದುರಂತ ಸಂಭವಿಸಿದ್ದು, ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ.
ಪ್ರಯಾಗ್ ರಾಜ್ ಫುಲ್ ಪುರದಲ್ಲಿರುವ ರಾಸಾಯನಿಕ ಗೊಬ್ಬರ ಕಾರ್ಖಾನೆಯಲ್ಲಿ ಅಮೋನಿಯ ಅನಿಲ ಸೋರಿಕೆಯಾಗಿ ದುರ್ಘಟನೆ ಸಂಭವಿಸಿದೆ. ಅನಿಲ ಸೋರಿಕೆಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಘಟನೆಯಲ್ಲಿ 14 ಕಾರ್ಮಿಕರು ಗಂಭೀರ ಸ್ಥಿತಿ ತಲುಪಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಫ್ಕೋ ಅಧಿಕಾರಿಗಳ ಪ್ರಕಾರ ಮಂಗಳವಾರ ರಾತ್ರಿ 11 ಗಂಟೆ ಸುಮಾರಿಗೆ ಘಟಕ 1 ರಲ್ಲಿ ಅನಿಲ ಸೋರಿಕೆಯಾಗಿ ಇಬ್ಬರು ಸಾವನ್ನಪ್ಪಿದ್ದಾರೆ. ಕಳೆದ ಐದಾರು ವರ್ಷದಲ್ಲಿ ಈ ಘಟಕದಲ್ಲಿ ಹಲವಾರು ಬಾರಿ ಅನಿಲ ಸೋರಿಕೆಯಾಗಿದೆ. 2019 ರಲ್ಲಿ ನಾಲ್ವರು ಕಾರ್ಮಿಕರು ಮೂರ್ಛೆ ತಪ್ಪಿದ್ದರು. ಈಗ ಭಾರಿ ದುರಂತ ಸಂಭವಿಸಿದೆ ಎಂದು ಹೇಳಲಾಗಿದೆ.