ಝಾನ್ಸಿ: ಉತ್ತರ ಪ್ರದೇಶದ ಝಾನ್ಸಿಯ ಸೈಬರ್ ಸೆಲ್ ಮತ್ತು ಕೊಟ್ವಾಲಿ ಠಾಣೆ ಪೊಲೀಸರು ಮಹಿಳೆಗೆ ಬ್ಲಾಕ್ಮೇಲ್ ಮಾಡಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಪುಷ್ಪೇಂದ್ರ ಕುಶ್ವಾಹ(24), ವಿಶಾಲ್ ಯಾದವ್(23) ಮತ್ತು ಹರ್ಶ್ ದಿವಾನ್(23) ಎಂದು ಗುರುತಿಸಲಾಗಿದೆ. ಯುವತಿ ಮತ್ತು ಕುಶ್ವಾಹ ಒಂದೇ ಕಾಲೇಜಿನಲ್ಲಿದ್ದರು. ಕಾಲಾನಂತರದಲ್ಲಿ, ಇಬ್ಬರ ನಡುವೆ ಸಂಬಂಧ ಬೆಳೆದಿದ್ದು, ಅದರ ಲಾಭವನ್ನು ಪಡೆದುಕೊಂಡ ಕುಶ್ವಾಹ ಅಶ್ಲೀಲ ವೀಡಿಯೊಗಳನ್ನು ಚಿತ್ರೀಕರಿಸಿಕೊಂಡಿದ್ದಾನೆ. ಅಲ್ಲದೇ ಅವಳನ್ನು ಬ್ಲ್ಯಾಕ್ ಮೇಲ್ ಮಾಡಲು ಅವುಗಳನ್ನು ಬಳಸಿಕೊಂಡಿದ್ದಾನೆ.
ಏಕಾಂತದಲ್ಲಿದ್ದಾಗ ಚಿತ್ರೀಕರಿಸಿದ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಕಳೆದ ಒಂದು ವರ್ಷದಲ್ಲಿ ವಿಡಿಯೋ ತೋರಿಸಿ ಆತ ತನ್ನ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಕೆಲವು ತಿಂಗಳುಗಳ ನಂತರ, ಕುಶ್ವಾಹನ ಸ್ನೇಹಿತ ವಿಶಾಲ್ ಯಾದವ್ ಕೂಡ ಇದರಲ್ಲಿ ಭಾಗಿಯಾಗಿದ್ದಾನೆ. ತಮ್ಮ ಲೈಂಗಿಕ ಬೇಡಿಕೆಗಳನ್ನು ಈಡೇರಿಸದಿದ್ದರೆ ವಿಡಿಯೋ ತುಣುಕುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡುವುದಾಗಿ ಬೆದರಿಕೆ ಹಾಕಿ ಇಬ್ಬರೂ ಅವಳ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಕುಶ್ವಾಹ ಮಂಗಳವಾರ ಯುವತಿಗೆ ಮರುದಿನ ನಿರ್ಜನ ಮನೆಗೆ ಬರಲು ಕೇಳಿಕೊಂಡಿದ್ದಾನೆ. ಅವರ ಇನ್ನೊಬ್ಬ ಸ್ನೇಹಿತ ಹರ್ಶ್ ದಿವಾನ್ ಕೂಡ ಅಲ್ಲಿಗೆ ಬರುವುದಾಗಿ ಹೇಳಲಾಗಿದೆ. ಇವರ ಕಾಟಕ್ಕೆ ಬೇಸತ್ತ ಯುವತಿ ಈ ಬಾರಿ ಪೊಲೀಸರಿಗೆ ಮಾಹಿತಿ ನೀಡಲು ನಿರ್ಧರಿಸಿದ್ದಾಳೆ.
ಮಾಹಿತಿ ನೀಡಿದ ಕೂಡಲೇ ಪೊಲೀಸರೂ ಕಾರ್ಯಪ್ರವೃತ್ತರಾಗಿದ್ದಾರೆ. ಬುಧವಾರ ಸೈಬರ್ ಸೆಲ್ ಮತ್ತು ಕೊಟ್ವಾಲಿ ಪೊಲೀಸರನ್ನು ಒಳಗೊಂಡ ತಂಡವು ಮಫ್ತಿಯಲ್ಲಿ ತೆರಳಿ ಶಂಕಿತರನ್ನು ಬಂಧಿಸಲು ಬಲೆ ಬೀಸಿದೆ. ಆರೋಪಿಗಳು ಹೇಳಿದ್ದ ಮನೆಗೆ ಯುವತಿ ಮಹಿಳೆ ಪ್ರವೇಶಿಸಿದ ನಂತರ ಪೊಲೀಸ್ ತಂಡ ಮನೆಯ ಮೇಲೆ ದಾಳಿ ನಡೆಸಿ ಮೂವರನ್ನು ಬಂಧಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 ಡಿ ಮತ್ತು 34 ಮತ್ತು ಐಟಿ ಕಾಯ್ದೆಯ ಸೆಕ್ಷನ್ 67 ರ ಅಡಿಯಲ್ಲಿ ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಝಾನ್ಸಿ ಡಿಐಜಿ ಜೋಗೇಂದ್ರ ಕುಮಾರ್ ತಿಳಿಸಿದ್ದಾರೆ.