ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶಾಲೆಯಲ್ಲಿಯೇ ಅಶ್ಲೀಲ ಚಿತ್ರ ನೋಡುತ್ತಿದ್ದ ಶಿಕ್ಷಕ ತನ್ನನ್ನು ನೋಡಿ ನಗಾಡಿದ ಎಂಟು ವರ್ಷದ ಬಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಶನಿವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿದ್ಯಾರ್ಥಿಯು ತನ್ನ ಸಹಪಾಠಿಗಳೊಂದಿಗೆ ತರಗತಿಯಲ್ಲಿದ್ದಾಗ ಶಿಕ್ಷಕ ಕುಲದೀಪ್ ಯಾದವ್ ಅವರನ್ನು ನೋಡಿ ನಗುತ್ತಿದ್ದ. ಈ ವೇಳೆ ಶಿಕ್ಷಕ ಅಶ್ಲೀಲ ವಿಡಿಯೋ ನೋಡುತ್ತಿದ್ದ. ತಾನು ಅಶ್ಲೀಲ ವಿಡಿಯೋ ನೋಡಿದ್ದನ್ನು ಗಮನಿಸಿದ ವಿದ್ಯಾರ್ಥಿ ಇತರೆ ಮಕ್ಕಳೊಂದಿಗೆ ನಗಾಡಿದ್ದಾನೆ ಎಂದು ಬಾಲಕನ ಕೂದಲನ್ನು ಹಿಡಿದು ಗೋಡೆಗೆ ತಲೆಯನ್ನು ಹೊಡೆಸಿದ್ದಾನೆ. ಶಿಕ್ಷಕನನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶಿಕ್ಷಕ ಯಾದವ್ ತರಗತಿಯಲ್ಲಿ ತನ್ನ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವೀಡಿಯೊವನ್ನು ವೀಕ್ಷಿಸುತ್ತಿದ್ದರು. ಆಗ ವಿದ್ಯಾರ್ಥಿಗಳು ಅವರನ್ನು ನೋಡಿದ್ದು, ತಮ್ಮಲ್ಲೇ ಚರ್ಚಿಸಿ ನಗಲು ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳ ಪ್ರತಿಕ್ರಿಯೆಯಿಂದ ಕೋಪಗೊಂಡ ಯಾದವ್, ನಂತರ ನನ್ನ ಮಗನನ್ನು ನಿಂದಿಸಿ ಅಮಾನುಷವಾಗಿ ಥಳಿಸಿದ್ದಾರೆ. ಅವರು ನನ್ನ ಮಗನ ಕೂದಲನ್ನು ಹಿಡಿದು ಗೋಡೆಗೆ ಗುದ್ದಿಸಿದ್ದಾರೆ. ಬೆತ್ತದಿಂದ ಹೊಡೆದಿದ್ದು, ನನ್ನ ಮಗನಿಗೆ ಕಿವಿ ಸೇರಿದಂತೆ ಇತರೆಡೆ ಗಾಯಗಳಾಗಿವೆ. ನಾನು ಶಿಕ್ಷಕನ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದೇನೆ ಎಂದು ಸಂತ್ರಸ್ತನ ತಂದೆ ತಿಳಿಸಿದ್ದಾರೆ.
ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ನಾವು ಶಿಕ್ಷಕನನ್ನು ವಿಚಾರಣೆಗಾಗಿ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ವಿವರವಾದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ(ಗ್ರಾಮೀಣ) ಗೋಪಿನಾಥ್ ಸೋನಿ ತಿಳಿಸಿದ್ದಾರೆ.