ಆಗ್ರಾ: ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಖಂಡೌಲಿ ಪೊಲೀಸ್ ಠಾಣೆ ವ್ಯಾಪ್ತಿಯ ನೆಹರಾ ಗ್ರಾಮದಲ್ಲಿ ಆರೋಪಿಗಳನ್ನು ಹಿಡಿಯಲು ಹೋದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಪ್ರಶಾಂತ್ ಯಾದವ್ ಗುಂಡೇಟಿಗೆ ಬಲಿಯಾಗಿದ್ದಾರೆ.
ಆಲೂಗಡ್ಡೆ ಕೊಯ್ಲು ಮಾಡುವ ಕುರಿತಾಗಿ ಸಹೋದರರ ನಡುವೆ ಜಗಳವಾಗಿದ್ದು ವಿವಾದ ಬಗೆಹರಿಸಲು ಹೋಗಿದ್ದ ಪ್ರಶಾಂತ್ ಯಾದವ್ ಅವರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ, ಆಲೂಗಡ್ಡೆ ಕೊಯ್ಲು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಹೋದರನಿಗೆ ಮತ್ತೊಬ್ಬ ಸಹೋದರ ಬೆದರಿಕೆ ಹಾಕಿದ್ದಾನೆ. ವಿಚಾರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿವಾದ ಬಗೆಹರಿಸಲು ಸಬ್ ಇನ್ಸ್ ಪೆಕ್ಟರ್ ಪ್ರಶಾಂತ್ ಯಾದವ್ ಮತ್ತು ಕಾನ್ಸ್ ಟೇಬಲ್ ಸ್ಥಳಕ್ಕೆ ತೆರಳಿದ್ದಾರೆ.
ಈ ವೇಳೆ ಸಹೋದರರಲ್ಲಿ ಒಬ್ಬಾತ ಗುಂಡಿಟ್ಟು ಪೊಲೀಸ್ ಅಧಿಕಾರಿಯನ್ನು ಕೊಲೆ ಮಾಡಿದ್ದಾನೆ. 35 ವರ್ಷದ ಪ್ರಶಾಂತ್ ಯಾದವ್ ಮೃತಪಟ್ಟಿದ್ದು, ಆರೋಪಿಗಳನ್ನು ಬಂಧಿಸಲು ಪೊಲೀಸ್ ತಂಡಗಳನ್ನು ರಚಿಸಲಾಗಿದೆ.
ವಿಶ್ವನಾಥ್ ಮತ್ತು ಶಿವನಾಥ್ ಎಂಬ ಸಹೋದರರ ನಡುವೆ ಆಲೂಗಡ್ಡೆ ಕೊಯ್ಲು ವಿಚಾರಕ್ಕೆ ಜಗಳವಾಗಿದ್ದು, ವಿಶ್ವನಾಥ್ ಬೆದರಿಕೆ ಹಾಕಿದ್ದಾನೆ ಎಂದು ಶಿವನಾಥ್ ಪೊಲೀಸರಿಗೆ ದೂರು ನೀಡಿದ್ದ. ಪ್ರಶಾಂತ್ ಯಾದವ್ ಪರಿಶೀಲನೆಗೆ ಹೋದಾಗ ವಿಶ್ವನಾಥ್ ತನ್ನ ಸಹಚರರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆತನನ್ನು ಹಿಡಿಯುವ ಉದ್ದೇಶದಿಂದ ಇನ್ಸ್ ಪೆಕ್ಟರ್ ಬೆನ್ನಟ್ಟಿ ಹೋಗಿದ್ದು, ಆತ ಗುಂಡು ಹಾರಿಸಿದ್ದಾನೆ. ಕುತ್ತಿಗೆಗೆ ಗುಂಡು ತಗುಲಿ ಪ್ರಶಾಂತ್ ಯಾದವ್ ಗಾಯಗೊಂಡಿದ್ದು, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆರೋಪಿಗಳು ಪರಾರಿಯಾಗಿದ್ದು ಬಂಧನಕ್ಕೆ ಬಲೆ ಬೀಸಲಾಗಿದೆ.
ಪ್ರಶಾಂತ್ ಯಾದವ್ ಬುಲಂದಶಹರ್ ಜಿಲ್ಲೆಯವರಾಗಿದ್ದು 2015ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದರು. ಅವರ ನಿಧನಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಂತಾಪ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ, ಅವಲಂಬಿತರಿಗೆ ಸರ್ಕಾರಿ ಉದ್ಯೋಗ ನೀಡುವ ಜೊತೆಗೆ ಅವರ ಗ್ರಾಮದ ಹಳ್ಳಿಗೆ ಪ್ರಶಾಂತ್ ಯಾದವ್ ಹೆಸರು ಇಡುವುದಾಗಿ ಘೋಷಿಸಲಾಗಿದೆ.