ಉತ್ತರ ಪ್ರದೇಶದ ಬಲಿಯಾದಲ್ಲಿ ಗನ್ ಅಂಗಡಿ ನಡೆಸುತ್ತಿದ್ದ ಉದ್ಯಮಿಯೊಬ್ಬ ಫೇಸ್ಬುಕ್ ಲೈವ್ ಬಂದು ಸಾಲಗಾರರಿಂದ ತನಗಾಗುತ್ತಿರುವ ಕಿರುಕುಳವನ್ನು ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ನನಗೆ ನ್ಯಾಯ ಕೊಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಮನವಿ ಮಾಡಿ ತನ್ನ ತಲೆಗೆ ಗುಂಡು ಹಾರಿಸಿಕೊಂಡಿದ್ದಾನೆ.
ನಂದಲಾಲ್ ಗುಪ್ತ ಗುಂಡು ಹಾರಿಸಿಕೊಂಡು ಮೃತಪಟ್ಟ ಉದ್ಯಮಿಯಾಗಿದ್ದು, ಈತ ತನ್ನ ವ್ಯಾಪಾರಕ್ಕಾಗಿ ಹಲವರಿಂದ ಸಾಲ ಪಡೆದುಕೊಂಡಿದ್ದ ಎಂದು ಹೇಳಲಾಗಿದೆ. ಆದರೆ ಅದಕ್ಕಿಂತ ಜಾಸ್ತಿಯೇ ಮರಳಿಸಿದರೂ ಸಹ ಸಾಲಗಾರರು ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.
ಇದರಿಂದ ಬೇಸತ್ತ ಆತ ಫೇಸ್ಬುಕ್ ಲೈವ್ ನಲ್ಲಿ ಬಂದು ತನ್ನ ಸಂಕಷ್ಟವೆಲ್ಲ ಹೇಳಿಕೊಂಡಿದ್ದಾನೆ. ಬಳಿಕ ಗನ್ ತೆಗೆದುಕೊಂಡು ನೇರವಾಗಿ ತನ್ನ ತಲೆಗೆ ಗುರಿ ಇಟ್ಟುಕೊಂಡು ಹಾರಿಸಿಕೊಂಡಿದ್ದಾನೆ. ಇದರ ಪರಿಣಾಮ ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಆ ಬಳಿಕವೂ ಫೇಸ್ಬುಕ್ ಲೈವ್ ಪ್ರಸಾರವಾಗುತ್ತಿತ್ತು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.