
ಉತ್ತರಪ್ರದೇಶದ ಸೈಫಾಯಿ ವೈದ್ಯಕೀಯ ಕಾಲೇಜು ವಿಶ್ವವಿದ್ಯಾನಿಲಯದಲ್ಲಿ ವೈದ್ಯರೊಬ್ಬರು ರೋಗಿಯೊಬ್ಬರಿಗೆ ಕಪಾಳಮೋಕ್ಷ ಮಾಡಿ ನಿಂದಿಸಿದ್ದಾರೆ. ಈ ಘಟನೆಯ ವೀಡಿಯೊ ವೈರಲ್ ಆಗಿದ್ದು ಜನರನ್ನು ಬೆಚ್ಚಿಬೀಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವ ವಿಡಿಯೋ ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದ್ದು, ವೈದ್ಯರ ವರ್ತನೆಯನ್ನು ಪ್ರಶ್ನಿಸಿದ್ದಾರೆ.
ವಿಡಿಯೋದಲ್ಲಿರುವಂತೆ ವೈದ್ಯರು ರೋಗಿಯ ಬಳಿಗೆ ಹೋಗಿ ಅವರನ್ನ ನಿಂದಿಸುತ್ತಾ ಕಪಾಳಮೋಕ್ಷ ಮಾಡುತ್ತಾರೆ. ರೋಗಿಯು ಹಾಸಿಗೆಯ ಮೇಲಿದ್ದರೂ ಅವರ ಆರೋಗ್ಯ, ಪರಿಸ್ಥಿತಿಯನ್ನೂ ಲೆಕ್ಕಿಸದೇ ಕ್ರೂರವಾಗಿ ವರ್ತಿಸಿದ್ದಾರೆ.
ಆಸ್ಪತ್ರೆಯ ಸಹಾಯಕ ಸಿಬ್ಬಂದಿ ವೈದ್ಯರಿಗೆ ಪರಿಸ್ಥಿತಿಯನ್ನು ವಿವರಿಸಲು ಪ್ರಯತ್ನಿಸುತ್ತಿದ್ದರೂ ವೈದ್ಯರು ತಾವು ವರ್ತಿಸಿದ ಬಗ್ಗೆ ಕ್ಷಮೆಯಾಚಿಸುವುದಿಲ್ಲ.
ತನ್ನ ತಪ್ಪುಗಳನ್ನು ಪುನರಾವರ್ತಿಸದಂತೆ ರೋಗಿಗೆ ಪದೇ ಪದೇ ಎಚ್ಚರಿಕೆ ನೀಡಿದ ವೈದ್ಯರು, ನನ್ನ ಸರಿ ತಪ್ಪುಗಳ ಬಗ್ಗೆ ನೀವು ಹೇಳಬೇಡಿ ಎಂದು ಸಿಬ್ಬಂದಿಯ ಮೇಲೂ ಕೂಗಾಡಿದ್ದಾರೆ.
ಈ ವಿಡಿಯೋವನ್ನು ವೈದ್ಯಕೀಯ ಕಾಲೇಜಿನ ಡೀನ್ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಆಂತರಿಕ ವಿಚಾರಣೆ ನಡೆಸಲಾಗಿದ್ದು, ವರದಿ ಬಂದ ನಂತರ ಆಸ್ಪತ್ರೆ ಆಡಳಿತ ಮಂಡಳಿ ಕ್ರಮ ಕೈಗೊಳ್ಳಲಿದೆ.