ಆಘಾತಕಾರಿ ಘಟನೆಯೊಂದರಲ್ಲಿ 16 ವರ್ಷದ ಮಗಳು 48 ವರ್ಷ ವಯಸ್ಸಿನ ತನ್ನ ತಾಯಿಗೆ ವಿಷ ಹಾಕಿರೋ ಘಟನೆ ನಡೆದಿದೆ. ವ್ಯಕ್ತಿಯೊಬ್ಬನ ಜೊತೆ ಮಗಳ ಸಂಬಂಧವನ್ನು ವಿರೋಧಿಸಿದಕ್ಕಾಗಿ ತಾಯಿಗೆ ವಿಷ ನೀಡಿದ್ದು ಇದರಿಂದ ಅಸ್ವಸ್ಥಗೊಂಡಿರುವ ಮಹಿಳೆ ಆಸ್ಪತ್ರೆ ಪಾಲಾಗಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಈ ಘಟನೆ ಅಕ್ಟೋಬರ್ 5 ರಂದು ದೀಹ್ ಪ್ರದೇಶದ ಗೊಂಡ್ವಾರಾ ಗ್ರಾಮದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ತನ್ನ ತಾಯಿ ಸಂಗೀತಾಗೆ ವಿಷ ಬೆರೆಸಿದ ಚಹಾವನ್ನು ನೀಡಿದ್ದಳು. ಅದರ ನಂತರ ಮಹಿಳೆಯ ಸ್ಥಿತಿ ಹದಗೆಟ್ಟಿತು. ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆ ಅಪಾಯದಿಂದ ಪಾರಾಗಿದ್ದು ಆಕೆ ನೀಡಿದ ದೂರಿನ ಮೇರೆಗೆ ಯುವತಿ ಮತ್ತು ಆಕೆಯ 18 ವರ್ಷದ ಪ್ರಿಯಕರ ಹಿಮಾಂಶು ಯಾದವ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಮಾಂಶು ಯಾದವ್, ನನ್ನ ಮಗಳ ಸಹಾಯದಿಂದ ಆಹಾರದಲ್ಲಿ ಕೆಲವು ವಿಷಕಾರಿ ವಸ್ತುಗಳನ್ನು ಬೆರೆಸಿದ್ದು ತನ್ನ ಕುಟುಂಬಕ್ಕೆ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಶನಿವಾರ ಯುವತಿಯನ್ನು ಬಾಲಾಪರಾಧಿಗಳ ಮನೆಗೆ ಕಳುಹಿಸಲಾಗಿದ್ದು, ಹಿಮಾಂಶು ಯಾದವ್‌ನನ್ನು ಜೈಲಿಗೆ ಕಳುಹಿಸಲಾಗಿದೆ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 328 (ವಿಷದಿಂದ ನೋವುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.