ಕ್ಷುಲ್ಲಕ ಕಾರಣಕ್ಕೆ ವಿವಾಹ ಸಮಾರಂಭವೊಂದರಲ್ಲಿ ನಡೆದ ಗಲಾಟೆಯು ಪೊಲೀಸರ ಆಗಮನದ ಬಳಿಕ ತಣ್ಣಗಾದ ಘಟನೆಯು ಉತ್ತರ ಪ್ರದೇಶದಲ್ಲಿ ನಡೆದಿದೆ.
ಪ್ರತಾಪಗಢ ಜಿಲ್ಲೆಯ ಕುಂದಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನರಸಿಂಗ್ಗಢ ಎಂಬಲ್ಲಿ ವಧುವಿನ ಮನೆ ತಲುಪಿದ ಬಳಿಕ ಅರ್ಧ ಗಂಟೆಗೂ ಹೆಚ್ಚು ಕಾಲ ವರನ ಸ್ನೇಹಿತರು ನೃತ್ಯ ಮಾಡಿದ್ದೇ ಗಲಾಟೆಗೆ ಕಾರಣ ಎನ್ನಲಾಗಿದೆ. ವಧುವಿನ ಕುಟುಂಬಸ್ಥರು ಸ್ವಾಗತ ಸಮಾರಂಭಕ್ಕಾಗಿ ಕಾಯುತ್ತಿದ್ದರೆ ವರನ ಕಡೆಯವರು ನೃತ್ಯದಲ್ಲಿ ಮುಳುಗಿದ್ದರು.
ವರ ಕಾರಿನ ಒಳಕ್ಕೆ ಕುಳಿತಿದ್ದರೆ ಆತನ ಸ್ನೇಹಿತರು ಕಾರಿನ ಮುಂದೆ ಅರ್ಧ ಗಂಟೆಗೂ ಹೆಚ್ಚು ಕಾಲ ನೃತ್ಯ ಮಾಡಿದ್ದಾರೆ. ವಧುವಿನ ಕಡೆಯವರು ನೃತ್ಯ ನಿಲ್ಲಿಸಿ ಸ್ವಾಗತ ಸಮಾರಂಭಕ್ಕೆ ಆಗಮಿಸುವಂತೆ ಮನವಿ ಮಾಡಿದ್ದರು. ಬಳಿಕ ಇದೇ ವಿಚಾರವಾಗಿ ಗಲಾಟೆ ಆರಂಭವಾಗಿದೆ.
ಗಲಾಟೆ ವಿಕೋಪಕ್ಕೆ ತಿರುಗಿದ ಪರಿಣಾಮ ವಧುವಿನ ಕಡೆಯವರು ಮದುವೆ ಮನೆಗೆ ಮುತ್ತಿಗೆ ಹಾಕಿದ್ದು ಮಾತ್ರವಲ್ಲದೇ ಕೆಲ ಅತಿಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಪರಿಸ್ಥಿತಿ ಹತೋಟಿಗೆ ಬರುತ್ತಿಲ್ಲ ಎಂಬುದು ಗಮನಕ್ಕೆ ಬರುತ್ತಿದ್ದಂತೆಯೇ ವರ ತನ್ನ ಸ್ನೇಹಿತರ ಜೊತೆಯಲ್ಲಿ ನೇರವಾಗಿ ಪೊಲೀಸ್ ಠಾಣೆಗೆ ತೆರಳಿದ್ದಾನೆ.
ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಲಾಟೆಯನ್ನು ನಿಯಂತ್ರಿಸಿ ವಿವಾಹ ಕಾರ್ಯವನ್ನು ನೆರವೇರಿಸಿಕೊಟ್ಟಿದ್ದಾರೆ ಎನ್ನಲಾಗಿದೆ.