ಲಖನೌ: 23 ವರ್ಷದ ಮಹಿಳೆಯ ಮೇಲೆ ಪದೇ ಪದೇ ಅತ್ಯಾಚಾರ, ಬಲವಂತದ ಗರ್ಭಪಾತ ಮತ್ತು ಬೆದರಿಕೆ ಆರೋಪದಡಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿರುದ್ಧ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಯುಪಿಎಸ್‌ಸಿ ಆಕಾಂಕ್ಷಿಯಾಗಿರುವ ಸಂತ್ರಸ್ತೆ ತನ್ನ ಎಲ್ಲಾ ಆರೋಪಗಳನ್ನು ಸಾಬೀತುಪಡಿಸಲು ತನ್ನ ಬಳಿ ಸಾಕ್ಷ್ಯವಿದೆ ಎಂದು ಹೇಳಿಕೊಂಡಿದ್ದು, ಎಎಸ್‌ಪಿಯನ್ನು ಅಮಾನತುಗೊಳಿಸುವಂತೆ ಒತ್ತಾಯಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಆಕೆ ಈ ವಿಷಯದಲ್ಲಿ ಪೊಲೀಸ್ ಕ್ರಮಕ್ಕೆ ಒತ್ತಾಯಿಸುತ್ತಿದ್ದಳು ಮತ್ತು ಮಹಿಳೆ ಘಟನೆಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ನಂತರ ಪ್ರಕರಣ ದಾಖಲಿಸಲಾಗಿದೆ.
ಭಯೋತ್ಪಾದನಾ ನಿಗ್ರಹ ದಳದಲ್ಲಿ(ಎಟಿಎಸ್) ನೇಮಕಗೊಂಡ ಆರೋಪಿ ಎಎಸ್ಪಿ ರಾಹುಲ್ ಶ್ರೀವಾಸ್ತವ ಅವರು ಹಲವಾರು ವರ್ಷಗಳಿಂದ ಲೈಂಗಿಕ ಕಿರುಕುಳ ನೀಡಿದ್ದರು ಮತ್ತು ಏಪ್ರಿಲ್ 2023 ರಲ್ಲಿ ಗರ್ಭಿಣಿಯಾದಾಗ ಬಲವಂತವಾಗಿ ಗರ್ಭಪಾತ ಮಾಡಿಸಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಶನಿವಾರ ದಾಖಲಿಸಲಾದ ಪ್ರಕರಣದಲ್ಲಿ ಎಎಸ್ಪಿ ಅವರ ಪತ್ನಿ ಮಾನಿನಿ ಶ್ರೀವಾಸ್ತವ್ ಮತ್ತು ಅವರ ನಾಲ್ವರು ಸ್ನೇಹಿತರ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ಗೋಮ್ತಿನಗರ ವಿಸ್ತಾರ್ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಸುಧೀರ್ ಅವಸ್ತಿ ತಿಳಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಸಂತ್ರಸ್ತೆ ಐದು ವರ್ಷಗಳ ಹಿಂದೆ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ಶ್ರೀವಾಸ್ತವ್ ಅವರೊಂದಿಗೆ ಸಂಪರ್ಕಕ್ಕೆ ಬಂದಿದ್ದಳು ಎಂದು ಆರೋಪಿಸಿದ್ದಾರೆ.
ಎಎಸ್ಪಿ ತನ್ನ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾರೆ ಮತ್ತು ತನಗೆ ಬೆದರಿಕೆ ಹಾಕಲು ಬಳಸುತ್ತಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಪ್ರಕರಣದ ತನಿಖೆಯನ್ನು ಆರಂಭಿಸಲಾಗಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಹೆಚ್‌ಒ ತಿಳಿಸಿದ್ದಾರೆ.