2009 ರಲ್ಲಿ 83 ಕೋಟಿ ರೂಪಾಯಿಗಳ ಹಗರಣವನ್ನು ಬಯಲಿಗೆಳೆದು ವೈರಿಗಳಿಂದ ಏಳು ಬಾರಿ ಗುಂಡುಗಳನ್ನು ಹೊಡೆಸಿಕೊಂಡಿದ್ದ ಉತ್ತರ ಪ್ರದೇಶದ ಅಧಿಕಾರಿ ರಿಂಕೂ ಸಿಂಗ್ ರಾಹಿ ಯು ಪಿ ಎಸ್ ಸಿ ಪರೀಕ್ಷೆಯಲ್ಲಿ 683 ನೇ ರ್ಯಾಂಕ್ ಗಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಇವರು 2008 ರಲ್ಲಿ ಯು ಪಿ ಎಸ್ ಸಿ ಪ್ರಾವಿನ್ಷಿಯಲ್ ಸಿವಿಲ್ ಸರ್ವೀಸಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದರು.
2009 ರಲ್ಲಿ ರಾಹಿ ಅವರಿಗೆ ಇನ್ನೂ 26 ವರ್ಷ ವಯಸ್ಸು. ಇವರು ಮುಜಾಫರ್ ನಗರದ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವಾಗ 83 ಕೋಟಿ ರೂಪಾಯಿಗಳ ಹಗರಣವನ್ನು ಬಯಲಿಗೆಳೆದಿದ್ದರು. ಇದರಿಂದ ಹಲವಾರು ಶತೃಗಳು ಹುಟ್ಟಿಕೊಂಡಿದ್ದರು. ಅಲ್ಲದೇ, ಈ ಶತೃಗಳು ಏಳು ಬಾರಿ ಹಾರಿಸಿದ ಗುಂಡುಗಳು ಇವರ ದೇಹವನ್ನು ಹೊಕ್ಕಿದ್ದವು. ಅದೃಷ್ಠವಶಾತ್, ಅವರು ಬದುಕುಳಿದಿದ್ದರು. ಆದರೆ, ಅವರ ಕಣ್ಣುಗಳಿಗೆ ಗಂಭೀರ ಸ್ವರೂಪದ ಹಾನಿಯಾಗಿತ್ತು ಅಲ್ಲದೇ ಅವರ ಮುಖ ವಿರೂಪಗೊಂಡಿತ್ತು.
ಈ ಘಟನೆಯ ನಂತರ ಅವರನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಎಂಬಂತೆ ಹಲವು ಸ್ಥಳಗಳಿಗೆ ವರ್ಗಾವಣೆ ಮಾಡಲಾಗಿತ್ತು. ರಾಹಿಯವರ ತಂದೆ ಶಿವದನ್ ಸಿಂಗ್ ಅಲಿಘರ್ ಜಿಲ್ಲೆಯ ಡೋರಿ ನಗರದಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಿವದನ್ ಸಿಂಗ್, ನನ್ನ ಮಕ್ಕಳನ್ನು ಶಾಲೆಗೆ ಕಳುಹಿಸುವಷ್ಟೂ ಆರ್ಥಿಕವಾಗಿ ನಾನು ಸಬಲನಾಗಿರಲಿಲ್ಲ. ರಾಹಿ ಸರ್ಕಾರಿ ಶಾಲೆಯಲ್ಲಿ ಓದಿದರು. ಶಾಲೆಗಳಲ್ಲಿ ಅವರು ವಿದ್ಯಾರ್ಥಿವೇತನ ಪಡೆದು ಪಿಸಿಎಸ್ ತೇರ್ಗಡೆ ಹೊಂದುವ ಮುನ್ನ ಟಾಟಾ ಇನ್ ಸ್ಟಿಟ್ಯೂಟ್ ನಲ್ಲಿ ಬಿಟೆಕ್ ಪಡೆದಿದ್ದರು ಎಂದಿದ್ದಾರೆ.