ವಿಧಾನ ಸಭಾ ಚುನಾವಣಾ ನಿಮಿತ್ತ ಉತ್ತರ ಪ್ರದೇಶದಲ್ಲಿ ಬಿಜೆಪಿ ಸಂಸದ ಮತ್ತು ನಟ ರವಿ ಕಿಶನ್ ಮತ್ತು ಭೋಜ್ಪುರಿ ಗಾಯಕಿ ನೇಹಾ ಸಿಂಗ್ ರಾಥೋರ್ ನಡುವೆ ಗಾಯನ ಸಮರ ಏರ್ಪಟ್ಟಿದೆ.
ಗೋರಖ್ಪುರ ಸಂಸದ ಮತ್ತು ಚಿತ್ರ ನಟ ರವಿ ಕಿಶನ್ ಇತ್ತೀಚೆಗೆ ’ಯುಪಿ ಮೇಂ ಸಬ್ ಬಾ’ (ಉತ್ತರ ಪ್ರದೇಶದಲ್ಲಿ ಎಲ್ಲವೂ ಇದೆ) ಹೆಸರಿನ ಭೋಜ್ಪುರಿ ಹಾಡೊಂದನ್ನು ಬಿಡುಗಡೆ ಮಾಡಿ ಮತದಾರರನ್ನು ಸೆಳೆಯಲು ಯತ್ನಿಸಿದ್ದರು. ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಾಡಿದ ಕೆಲಸಗಳನ್ನು ಈ ಹಾಡಿನಲ್ಲಿ ತೋರಲಾಗಿದೆ.
ಬಿಗ್ ನ್ಯೂಸ್: ಈ ರಾಜ್ಯದಲ್ಲಿ ಶುರುವಾಯ್ತು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಪ್ರಕ್ರಿಯೆ
ಇದಾದ ಒಂದು ದಿನದ ಬಳಿಕ ಭೋಜ್ಪುರಿ ಗಾಯಕಿ ನೇಹಾ ಸಿಂಗ್ ರಾಥೋರ್ ಇದಕ್ಕೆ ಪ್ರತಿಯಾಗಿ ಹಾಡು ಹಾಡಿ ’ಯುಪಿ ಮೇಂ ಕಾ ಬಾ’ (ಉತ್ತರ ಪ್ರದೇಶದಲ್ಲಿ ಏನಿದೆ ?) ಎಂದು ಕೇಳಿದ್ದಾರೆ. ತನ್ನ ಈ ರ‍್ಯಾಪ್ ಹಾಡಿನಲ್ಲಿ ಉತ್ತರ ಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿಯ ನಿರ್ವಹಣೆ, ಲಖಿಂಪುರ ಖೇರಿ ಹಿಂಸಾಚಾರ ಮತ್ತು ಹತ್ರಾಸ್ ಘಟನೆ ಸಂಬಂಧ ಯೋಗಿ ಆದಿತ್ಯನಾಥ್ ಸರ್ಕಾರವನ್ನು ಪ್ರಶ್ನಿಸಿದ್ದಾರೆ ನೇಹಾ. ಇದೇ ವೇಳೆ, ಗಂಗೆಯಲ್ಲಿ ಕೋವಿಡ್ ಸೋಂಕಿನಿಂದ ಮೃತಪಟ್ಟ ಮಂದಿಯ ಹೆಣಗಳು ತೇಲುತ್ತಿರುವ ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಚುನಾವಣೆ ಬಿಸಿಯಲ್ಲಿರುವ ರಾಜ್ಯದಲ್ಲಿ ಇಬ್ಬರ ಈ ಗಾಯನ ಸಮರ ಭಾರೀ ಟ್ರೆಂಡ್ ಸೃಷ್ಟಿಸಿದೆ.