ಉತ್ತರ ಪ್ರದೇಶದ ಝಾನ್ಸಿಯಲ್ಲಿ 60 ವರ್ಷ ವಯಸ್ಸಿನ ವ್ಯಕ್ತಿಯೊಬ್ಬ ಸುಮಾರು 20 ವರ್ಷಗಳ ನಂತರ ಪತ್ನಿ ಮತ್ತು ಮಕ್ಕಳು ವಾಪಸ್ ಬಂದಿದ್ದಕ್ಕೆ ಸಂತೋಷಗೊಳ್ಳುವ ಮುನ್ನವೇ ದುಃಖಿತರಾಗಿದ್ದಾರೆ. ಅನಿಲ್ ಮಿಶ್ರಾ ಅವರನ್ನು ಹುಡುಕಿಕೊಂಡು ಬಂದಿದ್ದ ಪತ್ನಿ ಹಾಗೂ ಮಕ್ಕಳು ಅವರ ಬಳಿ ಇದ್ದ 1.5 ಲಕ್ಷ ರೂಪಾಯಿ ತೆಗೆದುಕೊಂಡು ನಾಪತ್ತೆಯಾಗಿದ್ದಾರೆ.
ಸದ್ಯ ಅನಿಲ್ ಮಿಶ್ರಾ, ಸ್ಥಳೀಯ ದೇವಸ್ಥಾನದಲ್ಲಿ ಅರ್ಚಕರ ಕೆಲಸ ಮಾಡ್ತಿದ್ದಾರೆ. 25 ವರ್ಷಗಳ ಹಿಂದೆ ಮದುವೆ ಆಗಿದ್ದ ಅವರಿಗೆ ಇಬ್ಬರು ಮಕ್ಕಳು. ಆದ್ರೆ ಅನಿಲ್ ಮಿಶ್ರಾ ಟ್ರಕ್ ಡ್ರೈವರ್ ಆಗಿದ್ದ ಕಾರಣ, ಆರ್ಥಿಕ ಸ್ಥಿತಿ ಚೆನ್ನಾಗಿರಲಿಲ್ಲ. ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯನ್ನು ವಿರೋಧಿಸಿದ್ದಕ್ಕೆ ಅನಿಲ್ ಮಿಶ್ರಾ ಜೈಲು ಸೇರಬೇಕಾಗಿತ್ತು.
ಜೈಲಿನಿಂದ ವಾಪಸ್ ಬರ್ತಿದ್ದಂತೆ ಪತ್ನಿ ಮಕ್ಕಳ ಜೊತೆ ಪ್ರೇಮಿಯ ಮನೆ ಸೇರಿದ್ದಳು. ಅಲ್ಲಿಂದ ಇಲ್ಲಿಯವರೆಗೂ ಆಕೆ ಸಂಪರ್ಕದಲ್ಲಿರಲಿಲ್ಲ. ಆದ್ರೆ ಅನಿಲ್ ಮಿಶ್ರಾ ಸ್ವಂತ ಭೂಮಿಯನ್ನು ಸರ್ಕಾರ ವಶಕ್ಕೆಪಡಿಸಿಕೊಂಡ ಮೇಲೆ ಪರಿಹಾರವಾಗಿ 28 ಲಕ್ಷ ರೂಪಾಯಿ ನೀಡಿತ್ತು. ಈ ವಿಷ್ಯ ತಿಳಿಯುತ್ತಿದ್ದಂತೆ ದೇವಸ್ಥಾನಕ್ಕೆ ಹುಡುಕಿಕೊಂಡು ಬಂದ ಪತ್ನಿ ಹಾಗೂ ಮಕ್ಕಳು, ಆತನನ್ನು ಮನೆಗೆ ಕರೆದುಕೊಂಡು ಹೋಗುವ ಪ್ರಯತ್ನ ಮಾಡಿದ್ರು. ಹಣ ನೀಡುವಂತೆ ಕೇಳಿದ್ರು. ಅದಕ್ಕೆ ಅನಿಲ್ ನಿರಾಕರಿಸಿದಾಗ ಇತ್ತೀಚಿಗಷ್ಟೆ ಡ್ರಾ ಮಾಡಿದ್ದ 1.5 ಲಕ್ಷ ರೂಪಾಯಿ ನಗದನ್ನು ತೆಗೆದುಕೊಂಡು ಹೋಗಿದ್ದಾರೆ. ಅನಿಲ್ ಪೊಲೀಸರಿಗೆ ದೂರು ನೀಡಿದ್ದು, ಸೂಕ್ತ ಕ್ರಮಕೈಗೊಳ್ಳುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.