
ಪಿಲಿಭಿತ್: ಉತ್ತರ ಪ್ರದೇಶದ ಪಿಲಿಭಿತ್ ನಲ್ಲಿ ಗರ್ಭಿಣಿ ಮಹಿಳೆಯನ್ನು ಮೋಟಾರ್ ಬೈಕ್ ಗೆ ಕಟ್ಟಿ 200 ಮೀಟರ್‌ಗೂ ಹೆಚ್ಚು ದೂರ ಎಳೆದೊಯ್ದಿದ್ದ ಪತಿಯನ್ನು ಬಂಧಿಸಲಾಗಿದೆ.
ಆರೋಪಿ ಮದ್ಯವ್ಯಸನಿಯಾಗಿದ್ದು, ಅದಕ್ಕೆ ಪತ್ನಿ ವಿರೋಧಿಸಿದಾಗ ಇಂತಹ ಕೃತ್ಯವೆಸಗಿದ್ದಾನೆ. ಪಿಲಿಭಿತ್ ಜಿಲ್ಲೆಯ ಘುಂಗ್ ಚೈ ಗ್ರಾಮದಲ್ಲಿ ಶನಿವಾರ ಈ ಘಟನೆ ನಡೆದಿದೆ. ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ರಾಮ್ ಗೋಪಾಲ್ ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮ್ ಗೋಪಾಲ್ ಮದ್ಯಪಾನ ಮಾಡಿ ಮನೆಗೆ ಬಂದಾಗ ಪತ್ನಿ ಸುಮನ್ ಪ್ರತಿಭಟಿಸಿದ್ದಾಳೆ. ಕೋಪದ ಭರದಲ್ಲಿ ಹೆಂಡತಿಗೆ ಥಳಿಸಿದ ರಾಮ್ ಗೋಪಾಲ್ ನಂತರ ತನ್ನ ಮೋಟಾರ್ ಬೈಕ್ ಗೆ ಎಂಟು ತಿಂಗಳ ಗರ್ಭಿಣಿ ಪತ್ನಿಯನ್ನು ಕಟ್ಟಿಕೊಂಡು 200 ಮೀಟರ್ ಗೂ ಹೆಚ್ಚು ಎಳೆದೊಯ್ದಿದ್ದಾನೆ ಎನ್ನಲಾಗಿದೆ.
ಅಲ್ಲಿದ್ದವರು ರಾಮ್ ಗೋಪಾಲ್ ನನ್ನು ತಡೆಯಲು ಪ್ರಯತ್ನಿಸಿದರೂ 200 ಮೀಟರ್ ವರೆಗೂ ಎಳೆದೊಯ್ದಿದ್ದಾನೆ. ಕೊನೆಗೆ ಆತನನ್ನು ಪಟಡೆದು ಗರ್ಭಣಿ ಸುಮನ್ ಅವರನ್ನು ರಕ್ಷಿಸಲಾಗಿದ್ದು, ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ಜೋಡಿ ಮೂರು ವರ್ಷಗಳ ಹಿಂದೆ ಪ್ರೇಮ ವಿವಾಹವಾಗಿದ್ದು, ಕೆಲವೇ ದಿನಗಳಲ್ಲಿ ರಾಮ್ ಗೋಪಾಲ್ ಡ್ರಗ್ಸ್ ಚಟಕ್ಕೆ ಬಿದ್ದಿದ್ದ. ಈತನ ಕುಡಿತದಿಂದಾಗಿ ದಂಪತಿ ಜಗಳವಾಡುತ್ತಿದ್ದರು, ಆದರೆ ಶನಿವಾರ ವಿಕೋಪಕ್ಕೆ ತಿರುಗಿದೆ ಎಂದು ಘುಂಗ್ ಚಾಯ್ ಠಾಣಾಧಿಕಾರಿ ರಾಜೇಂದ್ರ ಸಿಂಗ್ ಸಿರೋಹಿ ತಿಳಿಸಿದ್ದಾರೆ.