ಪತ್ನಿಗೆ ಮೊಬೈಲ್ ಮೂಲಕ ಸಂದೇಶ ಕಳುಹಿಸಿದ್ದಕ್ಕೆ ಆಕೆಯೊಂದಿಗೆ ಚಾಟ್ ಮಾಡುತ್ತಿದ್ದಾನೆಂಬ ಶಂಕೆಯಿಂದ ಪತಿಯೊಬ್ಬ ತನ್ನ ನೆರೆಮನೆಯ ಯುವಕನಿಗೆ ಚಾಕುವಿನಿಂದ ಇರಿದು ಕೊಂದಿದ್ದಾನೆ.
ಚೂರಿ ಇರಿತದ ಬಗ್ಗೆ ಮಾಹಿತಿ ಪಡೆದ ಗ್ರಾಮಸ್ಥರು ಆರೋಪಿಗೆ ತೀವ್ರವಾಗಿ ಥಳಿಸಿದ್ದು, ಗಂಭೀರವಾಗಿ ಗಾಯಗೊಳಿಸಿದ್ದಾರೆ. ಆರೋಪಿಯನ್ನು ಚಿಕಿತ್ಸೆಗಾಗಿ ಉತ್ತರ ಪ್ರದೇಶದ ಗಾಜಿಪುರದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸೇರಿಸಲಾಗಿದೆ.
ಮಾಹಿತಿ ಪ್ರಕಾರ, ದಿಲ್ದಾರ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಜೂರಿ ಗ್ರಾಮದ ನಿವಾಸಿ ಜುನೈದ್ ಖಾನ್ ಮತ್ತು ಅವರ ಪತ್ನಿ ಮಹಾರಾಷ್ಟ್ರದಲ್ಲಿ ವಾಸವಾಗಿದ್ದರು. ಅಬ್ಬಾಸ್ ಖಾನ್ ಕೂಡ ಯಾವುದೋ ಕೆಲಸದ ನಿಮಿತ್ತ ಅಲ್ಲಿಗೆ ಹೋಗಿದ್ದು, ದಂಪತಿಯ ಮನೆಯಲ್ಲೇ ವಾಸವಾಗಿದ್ದನು. ಈ ಸಮಯದಲ್ಲಿ ಅಬ್ಬಾಸ್ ಮತ್ತು ಜುನೈದ್ ಪತ್ನಿ ಪರಸ್ಪರ ಮಾತನಾಡುತ್ತಿದ್ದರು. ಇದು ಜುನೈದ್‌ಗೆ ಇಷ್ಟವಾಗದೇ ಅಬ್ಬಾಸ್‌ನೊಂದಿಗೆ ಜಗಳವಾಡಿದ್ದಾರೆ. ಸ್ವಲ್ಪ ಸಮಯದ ನಂತರ ಅಬ್ಬಾಸ್ ವಾಪಸ್ ಮನೆಗೆ ಮರಳಿದ್ದು ಜುನೈದ್ ಮತ್ತು ಆತನ ಪತ್ನಿ ಕೂಡ ಎರಡು ತಿಂಗಳ ಹಿಂದೆ ತಮ್ಮ ಗ್ರಾಮಕ್ಕೆ ವಾಪಸ್ಸಾಗಿದ್ದರು.
ಒಂದು ದಿನದ ಹಿಂದೆ ಅಬ್ಬಾಸ್, ಜುನೈದ್ ಪತ್ನಿಯ ಮೊಬೈಲ್ ಫೋನ್‌ಗೆ ಸಂದೇಶ ಕಳುಹಿಸಿದ್ದ. ಇದನ್ನು ನೋಡಿದ ಜುನೈದ್ ಕೋಪಗೊಂಡಿದ್ದಾನೆ. ಮರುದಿನ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ಅಬ್ಬಾಸ್ ಹೊರಗೆ ಹೋಗುತ್ತಿದ್ದಾಗ ಜುನೈದ್ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಆತ ಸಾವನ್ನಪ್ಪಿದ್ದಾರೆ. ಚೂರಿ ಇರಿತದ ವಿಷಯ ತಿಳಿದ ಗ್ರಾಮಸ್ಥರು ಜುನೈದ್‌ಗೆ ಥಳಿಸಿದ್ದಾರೆ. ಇದರಿಂದ ಜುನೈದ್ ಕುಟುಂಬಸ್ಥರು ಹಾಗೂ ಪೊಲೀಸರು ಆತನನ್ನು ಚಿಕಿತ್ಸೆಗಾಗಿ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ದಾಖಲಿಸಿದ್ದಾರೆ.
ಜುನೈದ್ ಮತ್ತು ಅಬ್ಬಾಸ್ ನಡುವೆ ಹಣದ ವಿವಾದವೂ ಈ ವೇಳೆ ಮುನ್ನೆಲೆಗೆ ಬಂದಿದೆ. ಘಟನೆಯ ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ಮತ್ತು ಮೃತ ಅಬ್ಬಾಸ್ ಮನೆಗಳು ಪರಸ್ಪರ ಎದುರುಬದುರಾಗಿದ್ದು ಆರು ತಿಂಗಳ ಹಿಂದೆ ಆರೋಪಿ ಜುನೈದ್ ಅಬ್ಬಾಸ್ ಬಳಿ 45 ಸಾವಿರ ಸಾಲ ಪಡೆದಿದ್ದ ಎಂಬುದು ಗೊತ್ತಾಗಿದೆ. ಹಣವನ್ನು ಹಿಂದಿರುಗಿಸುವಂತೆ ಅಬ್ಬಾಸ್ ಅನೇಕ ಬಾರಿ ಕೇಳಿದ್ದ ಎಂಬ ಅಂಶವನ್ನು ಜುನೈದ್ ಹೊರಹಾಕಿದ್ದಾನೆ.
ಅಬ್ಬಾಸ್ ಜಾತ್ರೆಯಲ್ಲಿ ಮೇಕೆ ಮಾರಲು ಬೆಳಗ್ಗೆ 6 ಗಂಟೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಎಂದು ಮೃತ ಅಬ್ಬಾಸ್ ಸಹೋದರಿಯರು ತಿಳಿಸಿದ್ದಾರೆ. ಈ ವೇಳೆ ಜುನೈದ್ , ಅಬ್ಬಾಸ್ ನ ಕುತ್ತಿಗೆ ಸೇರಿದಂತೆ ದೇಹದ ಅನೇಕ ಜಾಗದಲ್ಲಿ ಇರಿದಿದ್ದಾನೆ ಎಂದರು. ಮೃತ ಅಬ್ಬಾಸ್ ಸೋದರ ಸಂಬಂಧಿ ಸೈಫ್ ಖಾನ್ ದೂರಿನ ಮೇರೆಗೆ ಜುನೈದ್ ವಿರುದ್ಧ ಪ್ರಕರಣ ದಾಖಲಾಗಿದೆ.