ಉತ್ತರ ಪ್ರದೇಶದ ಬಾಗ್‌ಪತ್‌ನಲ್ಲಿ ಮಗನೊಬ್ಬ ತನ್ನ ತಂದೆಯನ್ನು ಕೊಲೆ ಮಾಡಿ, ಶವವನ್ನು ಸಮೀಪದ ಕಾಡಿಗೆ ಎಸೆದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾನೆ. ಪೊಲೀಸರು ಭಾನುವಾರದಂದು ಈ ವಿಷಯವನ್ನು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಆರೋಪಿ ವೇದ್‌ಪಾಲ್, ಕೌಟುಂಬಿಕ ಕಲಹದ ನಂತರ ಗುದ್ದಲಿಯಿಂದ ತನ್ನ ತಂದೆ ಈಶ್ವರ್‌ನ ಗಂಟಲು ಸೀಳಿ ಕೊಲೆ ಮಾಡಿದ್ದಾನೆ. ವಿಚಾರಣೆಯ ಸಮಯದಲ್ಲಿ, ತನ್ನ ತಂದೆ ಈಶ್ವರ್ ಸೊಸೆಯೊಂದಿಗೆ (ವೇದ್‌ಪಾಲ್‌ನ ಹೆಂಡತಿ) ಅಕ್ರಮ ಸಂಬಂಧ ಹೊಂದಿದ್ದನೆಂದು ಆರೋಪಿಸಿದ್ದಾನೆ. ಇದರಿಂದಾಗಿ ಆತ ಈ ಕೃತ್ಯ ಎಸಗಿದ್ದಾನೆ.
“ಬಸೌದ್ ಗ್ರಾಮದ ನಿವಾಸಿ ಈಶ್ವರ್ ಕೂಲಿ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. ಶುಕ್ರವಾರ ತಡರಾತ್ರಿ ಆತನ ಮಗ ಗಂಟಲು ಸೀಳಿ ಕೊಲೆ ಮಾಡಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಮೃತನ ಮಗನೇ ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾನೆ” ಎಂದು ಬಾಗ್‌ಪತ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎನ್.ಪಿ. ಸಿಂಗ್ ತಿಳಿಸಿದ್ದಾರೆ.
ಆದರೆ, ತನಿಖಾಧಿಕಾರಿಗಳು ಮೃತನ ಆಪ್ತರ ಕೈವಾಡದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವೇದ್‌ಪಾಲ್‌ನ ಮೇಲೆ ಅನುಮಾನ ಹೆಚ್ಚಾದಂತೆ, ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಆತ ತಪ್ಪೊಪ್ಪಿಕೊಂಡಿದ್ದಾನೆ. ಈ ಕೃತ್ಯಕ್ಕೆ ಕಾರಣವನ್ನು ತಿಳಿಸಿದ್ದಾನೆ ಎಂದು ಸಿಂಗ್ ಹೇಳಿದರು.