ಫೇಸ್ ಬುಕ್ ನಲ್ಲಿ ಲೈವ್ ಮಾಡುತ್ತಲೇ 30 ವರ್ಷದ ವ್ಯಕ್ತಿಯೊಬ್ಬ ಗೋಮತಿ ನದಿಗೆ ಹಾರಿ ಪ್ರಾಣ ಕಳೆದುಕೊಂಡಿರೋ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪೊಲೀಸರು ಎನ್ ಡಿ ಆರ್ ಎಫ್ ಸಿಬ್ಬಂದಿಯನ್ನ ಸ್ಥಳಕ್ಕೆ ಕರೆಸಿ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ವ್ಯಕ್ತಿ ಇನ್ನೂ ಪತ್ತೆಯಾಗಿಲ್ಲ.
ಪೊಲೀಸರ ಪ್ರಕಾರ ಸಂತ್ರಸ್ತ ರಾಹುಲ್ ಫೇಸ್‌ಬುಕ್ ಲೈವ್ ಸೆಷನ್ ಮಾಡುತ್ತಾ, ಜೀವನದಲ್ಲಿ ನಾನು ತೀವ್ರತರ ಹೆಜ್ಜೆ ಇಡೋದಾಗಿ ಹೇಳಿದ್ದ. ಜೊತೆಗೆ ತನಗೆ ಕೆಲವು ವ್ಯಕ್ತಿಗಳು ಕಿರುಕುಳ ನೀಡುತ್ತಿದ್ದರು ಎಂದು ಹೇಳಿದ್ದನಂತೆ. ಆತನ ಮನೆಯಲ್ಲಿ ಆತ್ಮಹತ್ಯೆ ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಟೋನಿ ಮತ್ತು ಸುಜೀತ್ ವರ್ಮಾ ಎಂಬುವರು ಸೇರಿದಂತೆ ಐವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಗೋಮತಿ ನಗರ ಠಾಣಾಧಿಕಾರಿ ಡಿ.ಸಿ.ಮಿಶ್ರಾ ತಿಳಿಸಿದ್ದಾರೆ. ರಾಹುಲ್ ಅವರ ಫೇಸ್‌ಬುಕ್ ಲೈವ್ ವೀಕ್ಷಿಸಿದಾಗ ಅವರ ಕುಟುಂಬ ಸದಸ್ಯರು ಆಘಾತಕ್ಕೊಳಗಾದರು.
ರಾಹುಲ್ ಪತ್ನಿಯೊಂದಿಗೆ ಹೊರಗೆ ಹೋಗಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ. ಬಳಿಕ ಆಕೆಯನ್ನು ಮನೆಗೆ ಡ್ರಾಪ್ ಮಾಡಿ ಬೇಗ ಬರುವುದಾಗಿ ಹೇಳಿ ಮತ್ತೆ ಹೊರಗೆ ಹೋಗಿದ್ದ ಎಂದಿದ್ದಾರೆ. ರಾಹುಲ್ ಗಾಗಿ ಇನ್ನೂ ಹುಡುಕಾಟ ನಡೆಸಲಾಗ್ತಿದೆ.