ಫಿರೋಜಾಬಾದ್: ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ ಯಮುನಾ ನದಿಯ ದಡದಲ್ಲಿ ಶನಿವಾರ ತನ್ನ ಸ್ನೇಹಿತನ ಅಂತ್ಯಕ್ರಿಯೆಯ ಚಿತೆಗೆ ಹಾರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಗ್ಲಾ ಖಂಗರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿ ಅಶೋಕ್(42) ಅವರು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಯಮುನಾ ತೀರದಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ನಡೆಸಲಾಯಿತು. ಅವರ ಸ್ನೇಹಿತ ಆನಂದ್(40) ಅಲ್ಲಿಗೆ ಬಂದಿದ್ದರು. ಜನರು ಸ್ಮಶಾನ ಸ್ಥಳದಿಂದ ಹೊರಬರಲು ಪ್ರಾರಂಭಿಸಿದಾಗ, ಆನಂದ್ ಇದ್ದಕ್ಕಿದ್ದಂತೆ ಅಂತ್ಯಕ್ರಿಯೆಯ ಚಿತೆಗೆ ಹಾರಿದರು ಎಂದು ಸಿರ್ಸಗಂಜ್ ವೃತ್ತ ಅಧಿಕಾರಿ (ಸಿಒ) ಪ್ರವೀಣ್ ತಿವಾರಿ ತಿಳಿಸಿದ್ದಾರೆ.
ಅಲ್ಲಿ ನಿಂತಿದ್ದ ಜನರು ಆತನನ್ನು ಚಿತಾಭಸ್ಮದಿಂದ ಹೊರತೆಗೆದು ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿಂದ ಆಗ್ರಾ ವೈದ್ಯಕೀಯ ಕಾಲೇಜಿಗೆ ಕಳುಹಿಸಲಾಯಿತು. ಆದರೆ, ಆನಂದ್ ಆಗ್ರಾಕ್ಕೆ ತೆರಳುವ ಮಾರ್ಗಮಧ್ಯೆ ಮೃತಪಟ್ಟರು ಎಂದು ತಿವಾರಿ ತಿಳಿಸಿದ್ದಾರೆ.