ಮದುವೆಯಾಗಿ ಕೇವಲ ಎರಡು ಗಂಟೆಗಳಿಗೆ ತಲಾಕ್ ಎಂದು ಹೇಳುವ ಮೂಲಕ ವಧುವನ್ನು ಬಿಟ್ಟಿದ್ದ ಆಗ್ರಾದ ವ್ಯಕ್ತಿಯ ಮೇಲೆ ಕೇಸು ದಾಖಲಾಗಿದೆ. ಇಬ್ಬರ ನಿಕಾಹ್ ನಡೆದು ಕೇವಲ 2 ಗಂಟೆಗಳ ಬಳಿಕ ಈತ ತನ್ನ ಪತ್ನಿಗೆ ತಲಾಖ್ ನೀಡಿದ್ದಾನೆ.
ವರದಕ್ಷಿಣೆ ರೂಪದಲ್ಲಿ ತನಗೆ ಕಾರು ನೀಡಿಲ್ಲವೆಂದು ಕೋಪಗೊಂಡ ವರ ಈ ರೀತಿ ತಲಾಖ್ ನೀಡಿದ್ದು ತನ್ನ ಕುಟುಂಬಸ್ಥರೊಂದಿಗೆ ಮನೆಗೆ ವಾಪಸ್ಸಾಗಿದ್ದಾನೆ.
ವಧುವಿನ ಸಹೋದರ ಕಮ್ರಾನ್ ವಾಸಿ ತನ್ನ ಇಬ್ಬರು ಸಹೋದರಿಯರಾದ ಡಾಲಿ ಹಾಗೂ ಗೋರಿಗೆ ಆಗ್ರಾದ ಫತೇಹಾಬಾದ್ ರಸ್ತೆಯಲ್ಲಿರುವ ಮದುವೆ ಮಂಟಪದಲ್ಲಿ ಒಂದೇ ದಿನ ವಿವಾಹ ಮಾಡಿಸಿದ್ದರು. ನಿಕಾಹ್ ಕಾರ್ಯಕ್ರಮ ಮುಗಿದ ಬಳಿಕ ಗೋರಿ ಅತ್ತೆ ಮನೆಗೆ ಹೋಗಿದ್ದಾರೆ. ಆದರೆ ಡಾಲಿಯ ವರ ಮೊಹಮ್ಮದ್ ಆಸಿಫ್ ಮಾತ್ರ ವರದಕ್ಷಿಣೆ ರೂಪದಲ್ಲಿ ತನಗೆ ಕಾರು ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿದ್ದಾನೆ.
ಇದರಿಂದ ವಧು ಕುಟುಂಬಸ್ಥರ ಮೇಲೆ ಆಸಿಫ್ ಕುಟುಂಬಸ್ಥರು ಕೋಪಗೊಂಡಿದ್ದಾರೆ. ಡಾಲಿಯ ಪೋಷಕರು ವರದಕ್ಷಿಣೆಯ ರೂಪದಲ್ಲಿ ಖಂಡಿತವಾಗಿಯೂ ಕಾರು ನೀಡುತ್ತೇನೆ ಎಂದು ಹೇಳಿದ್ದರು. ಹೀಗಾಗಿ ಈ ಸ್ಥಳದಲ್ಲೇ ನಮಗೆ ಕಾರು ಬೇಕು ಇಲ್ಲವೇ ಐದು ಲಕ್ಷ ರೂಪಾಯಿ ಹಣ ನೀಡಿ ಎಂದು ಡಿಮ್ಯಾಂಡ್ ಮಾಡಿದ್ದಾರೆ.
ಡಾಲಿ ಕುಟುಂಬಸ್ಥರು ಆ ಸಮಯದಲ್ಲಿ ಅಷ್ಟು ದೊಡ್ಡ ಮೊತ್ತದ ಹಣ ರೆಡಿ ಮಾಡಲು ತಯಾರಿರಲಿಲ್ಲ. ಇದಾದ ಬಳಿಕ ಆಸಿಫ್ ಮೂರು ಬಾರಿ ತಲಾಖ್ ಎಂದಿದ್ದಾರೆ. ವಧುವನ್ನು ಅಲ್ಲೇ ಬಿಟ್ಟು ಮದುವೆ ಸ್ಥಳದಿಂದ ಹೊರಟಿದ್ದಾರೆ.
ಕಮ್ರಾನ್ ವಾಸಿ ನೀಡಿದ ದೂರಿನ ಆಧಾರದ ಮೇಲೆ ಆಸಿಫ್ ಮತ್ತು ಇತರ ಆರು ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಿರುವ ಎಲ್ಲ ಏಳು ಮಂದಿಯನ್ನು ಬಂಧಿಸಬೇಕು ಎಂದು ವಾಸಿ ಆಗ್ರಹಿಸಿದ್ದರು.