72 ಪ್ರಯಾಣಿಕರ ಜೊತೆ ನೇಪಾಳದ ಯೇತಿ ಏರ್ ಲೈನ್ಸ್ ನ ವಿಮಾನ ದುರಂತದಲ್ಲಿ ಮಡಿದ ಭಾರತೀಯ ಮೂಲದವರ ಕಥೆಗಳು ಬಗೆದಷ್ಟೂ ಕರುಣಾಜನಕ. ಭಾನುವಾರ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಭಾರತೀಯ ಪ್ರಯಾಣಿಕರ ಪೈಕಿ ಉತ್ತರ ಪ್ರದೇಶದ ಗಾಜಿಪುರದ 35 ವರ್ಷದ ವ್ಯಕ್ತಿಯೊಬ್ಬರು ಸಂತಾನ ಪ್ರಾಪ್ತಿಯಾದ ಬಳಿಕ ಹರಕೆ ತೀರಿಸಲು ಹೋಗಿದ್ದ ವೇಳೆ ಮೃತಪಟ್ಟಿರೋದು ಗೊತ್ತಾಗಿದೆ.
ಸಂತಾನ ಭಾಗ್ಯ ಪಡೆದ ಬಳಿಕ ಕಠ್ಮಂಡುವಿನ ಪ್ರಸಿದ್ಧ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಲು ಅವರು ವಿಮಾನ ಹತ್ತಿದ್ರು. ಆದರೆ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಗಾಜಿಪುರ ಜಿಲ್ಲೆಯ ಚಕ್ ಜೈನಬ್ ಗ್ರಾಮದ ನಿವಾಸಿ ಜೈಸ್ವಾಲ್, ಆರು ತಿಂಗಳ ಹಿಂದೆ ಸಂತಾನ ಭಾಗ್ಯ ಪಡೆದಿದ್ದರು. ಇದರ ಹರಕೆ ತೀರಿಸಲು ಪ್ರಸಿದ್ಧ ದೇವಾಲಯ ಕಠ್ಮಂಡುವಿಗೆ ಪೂಜೆ ಸಲ್ಲಿಸಲು ನೇಪಾಳಕ್ಕೆ ತೆರಳಿದ್ದರು ಎಂದು ಅವರ ಸಂಬಂಧಿ ತಿಳಿಸಿದ್ದಾರೆ.
68 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಯೇತಿ ಏರ್‌ಲೈನ್ಸ್ ವಿಮಾನವು ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಪೋಖರಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ನದಿಯ ಕಂದರಕ್ಕೆ ಪತನಗೊಂಡಿದೆ. ವಿಮಾನದಲ್ಲಿ ಐವರು ಭಾರತೀಯರು ಸೇರಿದಂತೆ 10 ಮಂದಿ ವಿದೇಶಿಯರು ಇದ್ದರು.