ಬಹುತೇಕ ಮಹಿಳೆಯರು ಒಬ್ಬಂಟಿಯಾಗಿ ಸಂಚರಿಸಲು ಹಿಂದೇಟು ಹಾಕುತ್ತಾರೆ. ಸುರಕ್ಷತೆಯ ಕುರಿತ ಭಯವೇ ಇದಕ್ಕೆ ಕಾರಣ. ಏಕಾಂಗಿಯಾಗಿ ಇರುವ ಮಹಿಳೆಯರು ಕಂಡ ವೇಳೆ ಕಾಮುಕರು ತಮ್ಮ ಕೆಟ್ಟ ದೃಷ್ಟಿ ಬೀರುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಹೇಯ ಕೃತ್ಯವನ್ನು ಸಹ ಎಸಗಲು ಹಿಂದೇಟು ಹಾಕುವುದಿಲ್ಲ.
ಮಹಿಳೆಯರ ಸುರಕ್ಷತೆಗಾಗಿ ಸರ್ಕಾರಗಳು ಹಲವು ಕಠಿಣ ಕಾನೂನುಗಳನ್ನು ಜಾರಿಗೆ ತಂದರೂ ಸಹ ಪ್ರಯೋಜನವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ಉತ್ತರಪ್ರದೇಶದ ವ್ಯಕ್ತಿಯೊಬ್ಬರು ವಿಶಿಷ್ಟ ಸಾಧನವೊಂದನ್ನು ತಯಾರಿಸಿದ್ದಾರೆ. ಅವರು ತಯಾರಿಸಿರುವ ಬ್ಯಾಗ್, ಚಪ್ಪಲಿ ಹಾಗೂ ರಿಂಗ್ ಎಲ್ಲರ ಗಮನ ಸೆಳೆಯುತ್ತಿವೆ.
ಮಹಿಳೆಯರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇದನ್ನು ರೂಪಿಸಲಾಗಿದ್ದು, ಸಂಕಷ್ಟದ ಪರಿಸ್ಥಿತಿ ಎದುರಾದ ಸಂದರ್ಭದಲ್ಲಿ ಬ್ಯಾಗ್ ನಲ್ಲಿರುವ ಬಟನ್ ಒತ್ತಿದರೆ ಗುಂಡು ಹೊಡೆದಂತಹ ಶಬ್ದ ಕೇಳಿ ಬರುತ್ತದೆ. ಇದರಿಂದ ಅಕ್ಕಪಕ್ಕದವರ ಗಮನ ಸೆಳೆಯಲು ಅನುಕೂಲವಾಗುತ್ತದೆ.
ಹಾಗೆ ಇವರು ರೂಪಿಸಿರುವ ಚಪ್ಪಲಿ ಸಹ ಗುಂಡಿನ ಸದ್ದು ಮಾಡುತ್ತದೆ. ಇನ್ನು ಕಿವಿಗೆ ಹಾಕಿಕೊಳ್ಳುವ ರಿಂಗ್ ನಲ್ಲಿ ಜಿಪಿಎಸ್ ಅಳವಡಿಸಲಾಗಿದ್ದು, ಮಹಿಳೆ ಯಾವ ಪ್ರದೇಶದಲ್ಲಿದ್ದಾರೆ ಎಂಬುದರ ನಿಖರ ಮಾಹಿತಿ ನೀಡುತ್ತದೆ. ಇದರ ಬೆಲೆ 2497 ರೂಪಾಯಿಗಳು ಎಂದು ಹೇಳಲಾಗಿದ್ದು, ಇವುಗಳನ್ನು ಇನ್ನಷ್ಟು ಅಪ್ಡೇಟ್ ಮಾಡುವ ಪ್ರಯತ್ನ ನಡೆಯುತ್ತಿದೆ. ಉತ್ತರ ಪ್ರದೇಶದ ಶ್ಯಾಮ್ ಚೌರಾಸಿಯಾ ಎಂಬವರು ಈ ಐಡಿಯಾದ ರೂವಾರಿಯಾಗಿದ್ದಾರೆ.