ವಿಚಿತ್ರ ಘಟನೆಯೊಂದರಲ್ಲಿ ಉತ್ತರ ಪ್ರದೇಶದ ಕಾನ್ಪುರದ 72 ವರ್ಷದ ವ್ಯಕ್ತಿಯನ್ನು ಪಶ್ಚಿಮ ಬಂಗಾಳದ ಮೂವರು ವಂಚಿಸಿದ್ದಾರೆ.
ಮೂವರನ್ನು ಈಗ ಬಂಧಿಸಲಾಗಿದೆ. ಅವಿನಾಶ್ ಕುಮಾರ್ ಶುಕ್ಲಾ ವಂಚನೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. ಜನರನ್ನು ಬೆತ್ತಲೆಯಾಗಿ ನೋಡುವ ಮತ್ತು ಭವಿಷ್ಯವನ್ನು ಮುನ್ಸೂಚಿಸುವ ಸಾಮರ್ಥ್ಯವನ್ನು ಹೊಂದಿರುವ “ಮ್ಯಾಜಿಕ್ ಮಿರರ್” ಎಂದು ನಂಬಿ ಅದನ್ನು ಖರೀದಿಸಲು 9 ಲಕ್ಷ ರೂ. ಕಳೆದುಕೊಂಡಿದ್ದಾರೆ.
ವಂಚಕರನ್ನು ಪಾರ್ಥ ಸಿಂಗ್ರೇ, ಮೊಲಯ ಸರ್ಕಾರ್, ಸುದೀಪ್ತ ಸಿನ್ಹಾ ರಾಯ್ ಎಂದು ಗುರುತಿಸಲಾಗಿದೆ. ವಹಿವಾಟು ನಡೆಯುತ್ತಿದ್ದ ಒಡಿಶಾದ ನಯಾಪಲ್ಲಿ ಪೊಲೀಸರು ಅವರೆಲ್ಲರನ್ನೂ ಬಂಧಿಸಿದ್ದಾರೆ.
ಬಂಧನದ ವೇಳೆ ಹಲವು ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ಒಂದು ಕಾರು, 28,000 ರೂಪಾಯಿ ನಗದು, ‘ಮಾಯಾ ಕನ್ನಡಿ’ಯ ಅತೀಂದ್ರಿಯ ಶಕ್ತಿಯನ್ನು ಪ್ರದರ್ಶಿಸುವ ವಿಡಿಯೋಗಳನ್ನು ಒಳಗೊಂಡ ಐದು ಮೊಬೈಲ್ ಫೋನ್‌ಗಳು ಮತ್ತು ಸಂಶಯಾಸ್ಪದ ಒಪ್ಪಂದ ಪತ್ರಗಳ ಸಂಗ್ರಹವೂ ಸೇರಿದೆ.
ಸಂತ್ರಸ್ತನನ್ನು ಪರಿಚಯಿಸಿಕೊಂಡ ವಂಚಕರು ಪುರಾತನ ವಸ್ತುಗಳ ಸಂಗ್ರಹಕ್ಕೆ ಹೆಸರುವಾಸಿಯಾದ ಸಿಂಗಾಪುರದ ಸಂಸ್ಥೆಯೊಂದರ ಉದ್ಯೋಗಿಗಳೆಂದು ನಂಬಿಸಿದ್ದಾರೆ. ಶುಕ್ಲಾಗೆ “ಮ್ಯಾಜಿಕ್ ಮಿರರ್” ಅನ್ನು 2 ಕೋಟಿ ರೂ.ಗೆ ಮಾರುವುದಾಗಿ ಆಫರ್ ನೀಡಿದ್ದಾರೆ. ಈ ಕನ್ನಡಿಯನ್ನು ಯುನೈಟೆಡ್ ಸ್ಟೇಟ್ಸ್‌ನ NASA ವಿಜ್ಞಾನಿಗಳು ಬಳಸಿದ್ದಾರೆ ಎಂದು ನಂಬಿಸಿದ್ದಾರೆ.
ಅವರು ಶುಕ್ಲಾರನ್ನು ಭುವನೇಶ್ವರಕ್ಕೆ ಕರೆತರುವಲ್ಲಿ ಯಶಸ್ವಿಯಾದರು. ಹೋಟೆಲ್ ತಲುಪಿದಾಗ ಶುಕ್ಲಾಗೆ ವಂಚನೆಗೊಳಗಾಗಿರುವುದು ಗೊತ್ತಾಗಿ ಹಣ ವಾಪಸ್ ಕೇಳಿದ್ದಾರೆ.
ನಯಾಪಲ್ಲಿ ಪೊಲೀಸ್ ಠಾಣೆಯ ಪ್ರಭಾರಿ ಇನ್ಸ್‌ಪೆಕ್ಟರ್ ಬಿಸ್ವರಂಜನ್ ಸಾಹೂ, ಈಗಾಗಲೇ 9 ಲಕ್ಷ ರೂಪಾಯಿ ಮೊತ್ತದ ಭಾರೀ ಮೊತ್ತವನ್ನು ವಂಚಕರು ಪಡೆದುಕೊಂಡಿದ್ದರು. ಹೋಟೆಲ್‌ನಲ್ಲಿ ಶುಕ್ಲಾ ಅವರಿಗೆ ವಂಚನೆಗೊಳಗಾಗಿರುವುದು ಗೊತ್ತಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.