ರಾಯ್ ಬರೇಲಿ: ತ್ರಿವರ್ಣ ಧ್ವಜವನ್ನು ಸುಟ್ಟು, ಕೃತ್ಯದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದ ವ್ಯಕ್ತಿಯನ್ನು ರಾಯ್ ಬರೇಲಿ ಪೊಲೀಸರು ಬಂಧಿಸಿದ್ದಾರೆ.
ನರೇಂದ್ರ ಸೈನಿ(27) ಬಂಧಿತ ಆರೋಪಿ, ಈತನನ್ನು ಶಿವಗಢದಿಂದ ಬಂಧಿಸಲಾಗಿದೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ ಆರೋಪದ ಮೇಲೆ ಈತನ ವಿರುದ್ಧ ಕ್ರಿಮಿನಲ್ ಕಾನೂನು ತಿದ್ದುಪಡಿ ಕಾಯ್ದೆಯ ಸೆಕ್ಷನ್ 7ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ನರೇಂದ್ರ ಯುವಕರು ಉದ್ಯೋಗ ಪಡೆಯಲು ಸಾಧ್ಯವಾಗದ ಕಾರಣ ಹತಾಶನಾಗಿದ್ದ ಎಂಬುದು ವಿಚಾರಣೆ ವೇಳೆ ಗೊತ್ತಾಗಿದೆ. ಸುಮಾರು ಮೂರು ತಿಂಗಳ ಹಿಂದೆ ಪೋಷಕರೊಂದಿಗೆ ಜಗಳವಾಡಿದ್ದ ಈತ ತನ್ನ ಮನೆ ತೊರೆದು ಅಜ್ಜ-ಅಜ್ಜಿಯ ಬಳಿ ವಾಸವಾಗಿದ್ದ. ಆರೋಪಿ ಅಥವಾ ಅವರ ಕುಟುಂಬದ ಯಾವುದೇ ಸದಸ್ಯರ ಕ್ರಿಮಿನಲ್ ದಾಖಲೆ ಕಂಡುಬಂದಿಲ್ಲ. ಅವರು ಯಾವುದೇ ರಾಜಕೀಯ ಸಂಘಟನೆಯ ಸಿದ್ಧಾಂತಕ್ಕೆ ಬದ್ಧರಾಗಿಲ್ಲ ಎಂದು ಮಹಾರಾಜ್ ಗಂಜ್ ನ ಸರ್ಕಲ್ ಅಧಿಕಾರಿ ರಾಮ್ ಕಿಶೋರ್ ಸಿಂಗ್ ಹೇಳಿದ್ದಾರೆ.
ಸೆಪ್ಟೆಂಬರ್ 16 ರ ನಸುಕಿನ ವೇಳೆ, ಆರೋಪಿ ತ್ರಿವರ್ಣ ಧ್ವಜ ಸುಡುವ ಆಕ್ಷೇಪಾರ್ಹ ವಿಡಿಯೊವನ್ನು ಅಪ್ ಲೋಡ್ ಮಾಡಿದ್ದು, ವಿಡಿಯೋ ಗಮನಕ್ಕೆ ಬಂದ ನಂತರ ತಂಡವನ್ನು ರಚಿಸಿ ಶಿವಗಢ ಪ್ರದೇಶದ ಜಗದೀಶ್ ಪುರ ಗ್ರಾಮದಲ್ಲಿ ಬಂಧಿಸಲಾಯಿತು ಎಂದು ಎಸ್.ಹೆಚ್.ಒ, ರಾಕೇಶ್ ಚಂದ್ರ ಹೇಳಿದರು.