ಎಸ್‌ಡಿಎಂ ಜ್ಯೋತಿ ಮೌರ್ಯ ಪ್ರಕರಣ ದೇಶಾದ್ಯಂತ ಭಾರಿ ಸುದ್ದಿ ಮಾಡಿತ್ತು. ಹೆಂಡತಿಯನ್ನು ಚೆನ್ನಾಗಿ ಓದಿಸಿ ಆಕೆಗೆ ಉದ್ಯೋಗ ಸಿಕ್ಕ ಬಳಿಕ ಗಂಡನನ್ನೇ ವರದಕ್ಷಿಣೆ ಆರೋಪದಲ್ಲಿ ಜೈಲಿಗೆ ಹಾಕಿಸಿದ ಪ್ರಕರಣವಿದು.
ಇತ್ತೀಚೆಗಂತೂ ಗಂಡಂದಿರು ತಮ್ಮ ಪತ್ನಿಯ ದಾಂಪತ್ಯ ದ್ರೋಹದ ಬಗ್ಗೆ ದೂರು ನೀಡುವ ಪ್ರಕರಣಗಳು ಭಾರಿ ಸುದ್ದಿ ಮಾಡುತ್ತಿವೆ. ಇದೀಗ ಇಂತಹುದೇ ಮತ್ತೊಂದು ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಧರಮ್ ಪುರ್ವಾ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಹೌದು, ಅಮಿತ್ ಕುಮಾರ್ ಎಂಬ ವ್ಯಕ್ತಿ ಮೇಲೆ ಆತನ ಪತ್ನಿ ಮತ್ತು ಆಕೆಯ ಪ್ರಿಯಕರ ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಹೆಂಡತಿಗೆ ಪ್ರತಿಷ್ಠಿತ ಆಸ್ಪತ್ರೆಯಲ್ಲಿ ಕೆಲಸ ಸಿಕ್ಕಿದ ನಂತರ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಅಮಿತ್ ಕುಮಾರ್ ಮತ್ತು ಅರ್ಚನಾ ಸಿಂಗ್ 2011 ರಲ್ಲಿ ವಿವಾಹವಾದರು. ಆರಂಭದಲ್ಲಿ ಎಲ್ಲವೂ ಚೆನ್ನಾಗಿಯೇ ಇತ್ತು. ಕೆಲವು ವರ್ಷಗಳ ನಂತರ, ದಂಪತಿಗೆ ಹೆಣ್ಣು ಮಗು ಜನಿಸಿದೆ. ಅಮಿತ್ ಕುಮಾರ್ ಪತ್ನಿಗೆ ಓದಲು ಮತ್ತು ಸ್ವಂತವಾಗಿ ಏನಾದರೂ ಮಾಡಬೇಕೆಂಬ ಹುಮ್ಮಸ್ಸಿತ್ತಂತೆ. ಆದರೆ, ಆಗ ಅಮಿತ್‌ನ ಆರ್ಥಿಕ ಸ್ಥಿತಿ ಅಷ್ಟೊಂದು ಚೆನ್ನಾಗಿರಲಿಲ್ಲ. ಆದರೂ, ಅಮಿತ್ ಪತ್ನಿಯನ್ನು ಗೋರಖ್‌ಪುರದ ರಾಜ್ ನರ್ಸಿಂಗ್ ಪ್ಯಾರಾ ಮೆಡಿಕಲ್ ಕಾಲೇಜಿಗೆ ಸೇರಿಸಿದನು.
ಪತ್ನಿಯ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸಲು ಜಮೀನು ಮಾರಬೇಕಾಯಿತು. ಆಕೆ, ಅಧ್ಯಯನದತ್ತ ಗಮನಹರಿಸಲು ಹಾಸ್ಟೆಲ್‌ನಲ್ಲಿ ಉಳಿದುಕೊಂಡಳು. ಇದಕ್ಕೆಲ್ಲಾ ಗಂಡನ ಸಂಪೂರ್ಣ ಬೆಂಬಲವಿತ್ತು. ನಂತರ, ಅರ್ಚನಾ ತನ್ನ ನರ್ಸಿಂಗ್ ಕೋರ್ಸ್ ಅನ್ನು ಮುಂದುವರಿಸಲು ಪ್ರಾರಂಭಿಸಿದಳು. ಅಷ್ಟು ದಿನ ಅಮಿತ್ ಆಕೆಯ ಸಂಪೂರ್ಣ ಖರ್ಚನ್ನು ಭರಿಸುತ್ತಿದ್ದರು.
ಪತ್ನಿ ಓದುತ್ತಿದ್ದ ಸಮಯದಲ್ಲಿ ಕಾಲೇಜು ಅಧಿಕಾರಿಯ ಸೋದರಳಿಯ ಧನಂಜಯ್ ಮಿಶ್ರಾ ಹಾಗೂ ತನ್ನ ಪತ್ನಿ ತುಂಬಾ ಆತ್ಮೀಯರಾಗಿದ್ದರು ಎಂದು ಅಮಿತ್ ಹೇಳಿದ್ದಾನೆ. ಅಮಿತ್ ತನ್ನ ಪತ್ನಿಯನ್ನು ಭೇಟಿಯಾಗುತ್ತಿದ್ದಾಗಲೆಲ್ಲಾ ಅವಳ ಕೋಣೆಯಲ್ಲಿ ಧನಂಜಯ್ ಇರುತ್ತಿದ್ದನಂತೆ. ಇದು ಅಮಿತ್ ಅವರ ಅನುಮಾನವನ್ನು ಹೆಚ್ಚಿಸಿದೆ. ತಾನು ಮತ್ತು ಧನಂಜಯ್ ಕೇವಲ ಸ್ನೇಹಿತರು ಎಂದು ಪತ್ನಿ ಹೇಳಿಕೊಂಡಿದ್ದಾಳೆ.
ಅರ್ಚನಾ ಕೋರ್ಸ್ ಮುಗಿದ ಕೂಡಲೇ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಸಿಕ್ಕಿತು. ಆ ನಂತರ ಧನಂಜಯ್ ಜೊತೆಗಿನ ಆಪ್ತತೆ ಇನ್ನಷ್ಟು ಹೆಚ್ಚಾಯಿತು. ಆತ ಅರ್ಚನಾಳನ್ನು ಪ್ರತಿದಿನ ಭೇಟಿಯಾಗಲು ಪ್ರಾರಂಭಿಸಿದ. ಇದಕ್ಕೆ ಅಮಿತ್ ಆಕ್ಷೇಪ ವ್ಯಕ್ತಪಡಿಸಿದಾಗ, ಅರ್ಚನಾಗೆ ಕರೆ ಮಾಡುವಂತೆ ಧನಂಜಯ್, ಅಮಿತ್ ಗೆ ಹೇಳಿದ್ದಾರೆ. ಆದರೆ, ಇವೆಲ್ಲಕ್ಕಿನ ಮೊದಲು, ಧನಂಜಯ್ ಅರ್ಚನಾಳನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಪಡೆಯುವಂತೆ ಮತ್ತು ವರದಕ್ಷಿಣೆ ಕಿರುಕುಳ ಪ್ರಕರಣವನ್ನು ದಾಖಲಿಸುವಂತೆ ಹೇಳಿದ್ದಾನೆ.
ಧನಂಜಯ್ ಹೇಳಿದಂತೆ ಮಾಡಿದ ಅರ್ಚನಾ, ಪತಿ ವಿರುದ್ಧ ದೂರು ನೀಡಿದಳು. ವರದಕ್ಷಿಣೆ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಮಧ್ಯಸ್ಥಿಕೆಗೆ ಹೋಗುತ್ತಿದ್ದಾಗ, ಹೆಂಡತಿಯ ಗೆಳೆಯ ಧನಂಜಯ್ ಹಾಗೂ ಆತನ ಸ್ನೇಹಿತರು ಜಗಳವಾಡಿ, ಅಮಿತ್ ನ ಫೋನ್ ಕಸಿದುಕೊಂಡಿದ್ದಾರೆ. ಅಲ್ಲದೆ, ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಅಮಿತ್ ದೂರಿದ್ದಾರೆ. ಸದ್ಯಕ್ಕೆ ಅಮಿತ್ ಕುಮಾರ್ ಕೂಡ ತನ್ನ ಪತ್ನಿ ವಿರುದ್ಧ ಪ್ರತಿ ದೂರು ದಾಖಲಿಸಿದ್ದಾರೆ.