ಜನನಿಬಿಡ ರಸ್ತೆಯಲ್ಲಿ ಇಬ್ಬರು ಹುಡುಗಿಯರನ್ನು ಥಳಿಸಿದ ಘಟನೆ ಉತ್ತರಪ್ರದೇಶದ ಕಾನ್ಪುರದಲ್ಲಿ ನಡೆದಿದೆ. ಬಂಧಿತ ಇಬ್ಬರು ಆರೋಪಿಗಳಲ್ಲಿ ಒಬ್ಬ ಥಳಿಸಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಕಾನ್ಪುರ ಪೊಲೀಸರು ಶನಿವಾರ ಇಬ್ಬರು ಯುವಕರನ್ನು ಬಂಧಿಸಿದ್ದಾರೆ.
ಈ ಘಟನೆಯು ಸುಮಾರು 10 ದಿನಗಳ ಹಿಂದೆ ನಡೆದಿದ್ದು, ಆರೋಪಿಗಳಲ್ಲಿ ಒಬ್ಬ ಕಾಲೇಜಿನಿಂದ ಮನೆಗೆ ಹಿಂದಿರುಗುತ್ತಿದ್ದ ಇಬ್ಬರು ಕಾಲೇಜು ಹುಡುಗಿಯರಿಗೆ ಕಿರುಕುಳ ನೀಡಿ ಹಲ್ಲೆ ನಡೆಸಿದ್ದರೆ, ಇನ್ನೊಬ್ಬ ಆರೋಪಿ ಘಟನೆಯನ್ನು ರೆಕಾರ್ಡ್ ಮಾಡಿ ನಂತರ ಇತರರೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾನೆ.
ಸಂತ್ರಸ್ತರು ಸಚೇಂದಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಲೇಜು ಮುಗಿಸಿ ಮನೆಗೆ ತೆರಳುತ್ತಿದ್ದಾಗ ಮಿಶ್ರಿ ಮಠದ ಬಳಿ ಆರೋಪಿಗಳು ಅವರನ್ನು ಅಡ್ಡಗಟ್ಟಿ ಕೃತ್ಯವೆಸಗಿದ್ದಾರೆ.
ಸ್ಕೂಟರ್‌ನಲ್ಲಿ ಬಂದ ಆರೋಪಿಗಳು ಸಂತ್ರಸ್ತರನ್ನು ತಡೆದು ಅವರೊಂದಿಗೆ ಮಾತನಾಡಲು ಯತ್ನಿಸಿದ್ದಾರೆ. ಹುಡುಗಿಯರು ಅವರೊಂದಿಗೆ ಮಾತನಾಡಲು ನಿರಾಕರಿಸಿದಾಗ, ಆರೋಪಿಗಳಲ್ಲಿ ಒಬ್ಬರು ಅವರನ್ನು ಥಳಿಸಲು ಪ್ರಾರಂಭಿಸಿದರು. ಮತ್ತೊಬ್ಬ ತಮ್ಮ ಫೋನ್‌ನಲ್ಲಿ ಹಲ್ಲೆಯನ್ನು ಸೆರೆ ಹಿಡಿದಿದ್ದಾನೆ. ಸ್ಥಳೀಯರು ಹುಡುಗಿಯರನ್ನು ರಕ್ಷಿಸಿದ್ದು, ನಂತರ ಸ್ಥಳದಿಂದ ಆರೋಪಿಗಳು ಪರಾರಿಯಾಗಿದ್ದಾರೆ.
ಘಟನೆಯ ಒಂದೆರಡು ದಿನಗಳ ನಂತರ, ಆರೋಪಿಗಳಲ್ಲಿ ಒಬ್ಬರು ಸಚಿನ್ ಕುಮಾರ್ ಎಂಬ ಮೂರನೇ ವ್ಯಕ್ತಿಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾನೆ. ಸಚಿನ್ ವಿಡಿಯೋವನ್ನು ಇತರರಿಗೆ ಫಾರ್ವರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ಸಂತ್ರಸ್ತರ ಕುಟುಂಬಸ್ಥರ ಗಮನಕ್ಕೆ ಬಂದಿದೆ.
ಘಟನೆಯ ಬಗ್ಗೆ ತಿಳಿದ ನಂತರ ಸಂತ್ರಸ್ತರ ಕುಟುಂಬದವರು ಮೂವರು ಆರೋಪಿಗಳ ವಿರುದ್ಧ ಶುಕ್ರವಾರ ಸಚೇಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಾಲಕಿಯರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಅಮಿತ್ ಮತ್ತು ಘಟನೆಯನ್ನು ರೆಕಾರ್ಡ್ ಮಾಡಿ ವಿಡಿಯೋ ವೈರಲ್ ಮಾಡಿದ ಅಫ್ರಿದಿಯನ್ನು ಬಂಧಿಸಿದ್ದಾರೆ ಎಂದು ಪಶ್ಚಿಮ ಡಿಸಿಪಿ ರಾಜೇಶ್ ಕುಮಾರ್ ಸಿಂಗ್ ತಿಳಿಸಿದ್ದಾರೆ.