ಬರೇಲಿ: ಉತ್ತರಪ್ರದೇಶದ ಫಿಲಿಬಿತ್ ನಗರದಲ್ಲಿ ಮೂರು ಮಕ್ಕಳ ತಾಯಿಯಾಗಿರುವ ವಿಧವೆ ಮೇಲೆ ಸಂಬಂಧಿಯೇ ಅತ್ಯಾಚಾರ ಎಸಗಿದ್ದಾನೆ. ಪದೇ ಪದೇ ಅತ್ಯಾಚಾರ ಎಸಗಿದ ಆರೋಪಿ ಅಸ್ವಾಭಾವಿಕ ಲೈಂಗಿಕ ಕ್ರಿಯೆಗೆ ಒತ್ತಾಯಿಸುತ್ತಿದ್ದನಲ್ಲದೆ ಮಹಿಳೆಗೆ ಬೆಂಕಿ ಹಚ್ಚಲು ಪ್ರಯತ್ನ ನಡೆಸಿದ್ದಾನೆ.
32 ವರ್ಷದ ಮಹಿಳೆ ಈ ಕುರಿತಾಗಿ ದೂರು ನೀಡಿದ್ದಾಳೆ. ಮೂರು ಮಕ್ಕಳ ತಾಯಿಯಾಗಿರುವ ಮಹಿಳೆ 55 ವರ್ಷದ ವ್ಯಕ್ತಿಯ ವಿರುದ್ಧ ದೂರು ನೀಡಿದ್ದಾಳೆ. ಮಹಿಳೆಯ ತಂಗಿಯ ಮಾವನಾಗಿರುವ ಆರೋಪಿ ನಿದ್ರಾಜನಕ ಚಹಾ ಕೊಟ್ಟು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಕೃತ್ಯದ ವಿಡಿಯೋ ಮಾಡಿಕೊಂಡಿದ್ದ ಆರೋಪಿ ಬ್ಲಾಕ್ ಮೇಲ್ ಮಾಡಿ ಪದೇ ಪದೇ ಅತ್ಯಾಚಾರ ಎಸಗಿದ್ದಲ್ಲದೇ, ಅಸ್ವಾಭಾವಿಕ ಲೈಂಗಿಕ ಕ್ರಿಯೆ ಬಲವಂತ ಮಾಡಿದ್ದಾನೆ. ಹೇಳಿದಂತೆ ಕೇಳದಿದ್ದರೆ ಮಕ್ಕಳು ಹಾಗೂ ನನ್ನನ್ನು ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ ಎಂದು ಮಹಿಳೆ ದೂರು ನೀಡಿದ್ದಾಳೆ.
ಅತ್ಯಾಚಾರದ ವಿಡಿಯೋ ತೋರಿಸಿ ಬೆದರಿಕೆ ಹಾಕಿ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಒಪ್ಪದಿದ್ದಾಗ, ಮಹಿಳೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ್ದಾನೆ. ನಂತರದಲ್ಲಿ ಮಹಿಳೆ ಪೊಲೀಸರನ್ನು ಸಂಪರ್ಕಿಸಿದ್ದಾಳೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೂ ದೂರು ನೀಡಿದ್ದಾಳೆ. ನಂತರದಲ್ಲಿ ಸಂಬಂಧಿಸಿದ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಿಕೊಳ್ಳಲು ಎಸ್ಪಿ ಸೂಚನೆ ನೀಡಿದ್ದಾರೆ. ಪ್ರಕರಣ ದಾಖಲಾದ ನಂತರ ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.