ಹಸುವಿನ ಸಗಣಿಯಿಂದ ಸಿ.ಎನ್.ಜಿ. ತಯಾರಿಸುವ ಯೋಜನೆಯನ್ನು ಯುಪಿ ಸರ್ಕಾರ ಶೀಘ್ರದಲ್ಲೇ ಪ್ರಾರಂಭಿಸಲಿದೆ. ರೈತರಿಗೆ ಕೆಜಿಗೆ 1.5 ರೂ. ನೀಡಲಾಗುವುದು ಎಂದು ಉತ್ತರ ಪ್ರದೇಶದ ಸಚಿವ ಧರಂಪಾಲ್ ಸಿಂಗ್ ಹೇಳಿದ್ದಾರೆ.
ಸಂಕುಚಿತ ನೈಸರ್ಗಿಕ ಅನಿಲವನ್ನು ತಯಾರಿಸಲು ಹಸುವಿನ ಸಗಣಿಯನ್ನು ಬಳಸುವ ಕಾರ್ಯವನ್ನು ರಾಜ್ಯದಲ್ಲಿ ಶೀಘ್ರದಲ್ಲೇ ಪ್ರಾರಂಭಿಸಲಾಗುವುದು, ಇದಕ್ಕಾಗಿ ರೈತರಿಂದ ಪ್ರತಿ ಕೆಜಿಗೆ 1.50 ರೂ ದರದಲ್ಲಿ ಹಸುವಿನ ಸಗಣಿ ಖರೀದಿಸಲಾಗುವುದು. ಈ ಯೋಜನೆಗೆ ಬರೇಲಿಯನ್ನು ಮಾದರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ವಿಕಾಸ ಭವನದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್, ಒಂದು ವರ್ಷದೊಳಗೆ ಬಿಡಾಡಿ ದನಗಳು ರಸ್ತೆಯಲ್ಲಿ ಅಡ್ಡಾಡುವ ಮತ್ತು ರೈತರ ಹೊಲಗಳಿಗೆ ನುಗ್ಗುವ ಸಮಸ್ಯೆಗೆ ಅಂತ್ಯ ಹಾಡಲಾಗುವುದು. ರೈತರ ಮನೆಗಳಲ್ಲಿಯೇ ಪ್ರಾಣಿಗಳ ಚಿಕಿತ್ಸೆ ಸಾಧ್ಯವಾಗಲಿದ್ದು, ಇದಕ್ಕಾಗಿ ರಾಜ್ಯ ಸರ್ಕಾರವು ಪಶು ವೈದ್ಯಕೀಯ ಸಂಚಾರಿ ಸೇವೆ ಆರಂಭಿಸಲಿದೆ ಎಂದರು.
ಈ ಪಶುವೈದ್ಯಕೀಯ ಸಂಚಾರಿ ಸೇವೆಯಲ್ಲಿ ಪ್ರತಿ ವಾಹನದಲ್ಲಿ ಒಬ್ಬ ವೈದ್ಯರು, ಇಬ್ಬರು ಕಂಪೌಂಡರ್ ಗಳು ಮತ್ತು ಒಬ್ಬ ಚಾಲಕ ಇರುತ್ತಾರೆ. ಕರೆ ಸ್ವೀಕರಿಸಿದ ಅವರು ಸ್ಥಳಕ್ಕೆ ತಲುಪಿ ಚಿಕಿತ್ಸೆ ನೀಡುತ್ತಾರೆ. ಅಗತ್ಯವಿದ್ದರೆ, ಜಾನುವಾರನ್ನು ಆಸ್ಪತ್ರೆಗೆ ಕರೆದೊಯ್ಯುವ ಸೌಲಭ್ಯವಿದೆ ಎಂದು ಹೇಳಿದ್ದಾರೆ.