ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಲಕ್ಷಣ ಘಟನೆಯೊಂದು ಬೆಳಕಿಗೆ ಬಂದಿದೆ. ನಿತ್ಯ ಮದ್ಯ ಸೇವನೆ ಮಾಡುವ ಚಟ ಹೊಂದಿದ್ದ ಸರ್ಕಾರಿ ನೌಕರನೊಬ್ಬ ಇದಕ್ಕಾಗಿ ಹಣ ಹೊಂದಿಸಲು ಕಚೇರಿಯಲ್ಲಿದ್ದ ಪಿಂಚಣಿ ದಾಖಲೆಗಳನ್ನೇ ಗುಜರಿಗೆ ಮಾರಾಟ ಮಾಡಿದ್ದಾನೆ.
ಹಳೆಯ ಪಿಂಚಣಿ ದಾಖಲೆಗಳನ್ನು ಹಿರಿಯ ಅಧಿಕಾರಿಗಳು ಹುಡುಕಲು ಮುಂದಾದ ವೇಳೆ ಈ ಘಟನೆ ಬೆಳಕಿಗೆ ಬಂದಿದ್ದು, ಇದೀಗ ಗುತ್ತಿಗೆ ಆಧಾರದ ಮೇಲೆ ಸರ್ಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ 45 ವರ್ಷದ ಮೋಹನ್ ಎಂಬಾತನನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಕಾನ್ಪುರದ ವಿಕಾಸ್ ಭವನದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್, ಸಮೀಪದ ಗುಜರಿ ಅಂಗಡಿಯವನೊಂದಿಗೆ ಡೀಲ್ ಮಾಡಿಕೊಂಡಿದ್ದು, ನಿತ್ಯವೂ ಹಳೆಯ ಪಿಂಚಣಿ ದಾಖಲೆಗಳನ್ನು ಚೀಲದಲ್ಲಿ ತುಂಬಿಕೊಂಡು ಬರುತ್ತಿದ್ದ. ಇದಕ್ಕಾಗಿ ತನಗೆ ಮದ್ಯ ಸೇವಿಸಲು ಬೇಕಾದ 60 ರೂಪಾಯಿಗಳನ್ನು ಫಿಕ್ಸ್ ಮಾಡಿಕೊಂಡಿದ್ದು, ಈ ರೀತಿ ಕಳೆದ ಮೂರ್ನಾಲ್ಕು ತಿಂಗಳಿನಿಂದಲೂ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.
ಯಾವುದೋ ಕಾರಣಕ್ಕೆ ಹಳೆಯ ಪಿಂಚಣಿ ದಾಖಲೆ ಹುಡುಕಲು ಅಧಿಕಾರಿಗಳು ಮುಂದಾದಾಗ ನಾಪತ್ತೆಯಾಗಿರುವುದು ಬೆಳಕಿಗೆ ಬಂದಿದೆ. ಬಳಿಕ ಸಂಪೂರ್ಣ ತಪಾಸಣೆ ನಡೆಸಿದ ವೇಳೆ 2017ರಿಂದ 2022ರ ನಡುವಿನ ಪಿಂಚಣಿ ದಾಖಲೆಗಳು ಇಲ್ಲವೆಂಬ ಸಂಗತಿ ತಿಳಿದು ಬಂದಿದೆ. ಅನುಮಾನದ ಮೇರೆಗೆ ಮೋಹನನನ್ನು ವಿಚಾರಿಸಿ ಸಂಪೂರ್ಣ ವೃತ್ತಾಂತ ಹೊರ ಬಿದ್ದಿದ್ದು, ಇದೀಗ ಆತನ ವಿರುದ್ಧ ಕೇಸ್ ದಾಖಲಿಸಲಾಗಿದೆ. ಅಲ್ಲದೆ ಗುಜರಿ ಅಂಗಡಿಯಿಂದ ಒಂದಷ್ಟು ಪಿಂಚಣಿ ದಾಖಲೆ ಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಬಹಳಷ್ಟು ದಾಖಲೆಗಳು ಮರಳಿ ಸಿಕ್ಕಿಲ್ಲ ಎನ್ನಲಾಗಿದೆ.