ಉತ್ತರಪ್ರದೇಶದ ಆಸ್ಪತ್ರೆಯೊಂದರಲ್ಲಿ ಆಘಾತಕಾರಿ ಘಟನೆ ನಡೆದಿದೆ. ಆಸ್ಪತ್ರೆಯಲ್ಲಿಯೇ ಬಾಲಕಿಯ ಮೃತದೇಹವನ್ನು ನಾಯಿಯೊಂದು ಎಳೆದು ತಿಂದಿರುವ ವಿಡಿಯೋ ವೈರಲ್ ಆಗಿದೆ.
ಸಂಬಾಲ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅಪಘಾತದಲ್ಲಿ ಮೃತಪಟ್ಟಿದ್ದ ಬಾಲಕಿ ಮೃತದೇಹವನ್ನು ಮರಣೊತ್ತರ ಪರೀಕ್ಷೆಗಾಗಿ ಜಿಲ್ಲಾ ಆಸ್ಪತ್ರೆಗೆ ಕರೆತರಲಾಗಿದೆ. ಮರಣೋತ್ತರ ಪರೀಕ್ಷೆಗಾಗಿ ಆಕೆಯ ಮೃತದೇಹವನ್ನು ಸ್ಟ್ರೆಚರ್ ನಲ್ಲಿ ಇಟ್ಟಿದ್ದು ಈ ವೇಳೆ ನಾಯಿಯೊಂದು ಶವ ಎಳೆದು ತಿನ್ನಲು ಮುಂದಾಗಿದೆ.
ಅಲ್ಲೇ ಇದ್ದ ವ್ಯಕ್ತಿಯೊಬ್ಬ ಇದನ್ನು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಆಸ್ಪತ್ರೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ರೀತಿಯಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಮೃತ ಬಾಲಕಿಯ ತಂದೆ ಮಾತನಾಡಿ, ಮರಣೋತ್ತರ ಪರೀಕ್ಷೆಗಾಗಿ ಮಗಳ ಮೃತದೇಹವನ್ನು ತಂದರೂ ತಕ್ಷಣಕ್ಕೆ ಸ್ಪಂದಿಸಿಲ್ಲ. ಎರಡು ಗಂಟೆಗಳ ಕಾಲ ಅಲ್ಲೇ ಇದ್ದ ಶವವನ್ನು ನಾಯಿ ಎಳೆದಿದೆ ಎಂದು ಹೇಳಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ವೈದ್ಯಕೀಯ ಅಧಿಕಾರಿಗಳು ತನಿಖೆಗೆ ಸಮಿತಿ ರಚಿಸಿದ್ದು, ನಿರ್ಲಕ್ಷ್ಯ ತೋರಿದ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.