ಅಯೋಧ್ಯಾ: ಹೊಸದಾಗಿ ಉದ್ಘಾಟನೆಗೊಂಡ ಗೋರಖ್‌ಪುರ-ಲಖನೌ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಉತ್ತರ ಪ್ರದೇಶದ ಅಯೋಧ್ಯೆಯ ಬಳಿ ಕಲ್ಲು ತೂರಾಟ ನಡೆಸಲಾಗಿದೆ. ಜುಲೈ 9 ರಂದು ರೈಲಿಗೆ ಆಕಸ್ಮಿಕವಾಗಿ ಡಿಕ್ಕಿ ಹೊಡೆದು ಆರು ಮೇಕೆಗಳ ಸಾವನ್ನಪ್ಪಿದ್ದವು. ಹೀಗಾಗಿ ಸಿಟ್ಟಿಗೆದ್ದ ಜನರ ಗುಂಪು ರೈಲಿಗೆ ಕಲ್ಲು ತೂರಾಟ ನಡೆಸಿದೆ.
ಕಲ್ಲು ತೂರಾಟದಿಂದ ಕಿಟಕಿಗೆ ಹಾನಿ:
ಅಯೋಧ್ಯೆ ಬಳಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಕಲ್ಲು ತೂರಾಟ ನಡೆಸುವ ಮೂಲಕ ಜನರ ಗುಂಪೊಂದು ಆಕ್ರೋಶ ಹೊರಹಾಕಿದೆ. ರೌನಾಹಿ ಪೊಲೀಸ್ ಠಾಣೆಯ ಸೊಹವಾಲ್ ಪ್ರದೇಶದಲ್ಲಿ ಈ ಘಟನೆ ಸಂಭವಿಸಿದ್ದು, ಎರಡು ಕೋಚ್‌ಗಳ ಕಿಟಕಿಯ ಗಾಜುಗಳಿಗೆ ಭಾಗಶಃ ಹಾನಿಯಾಗಿದೆ. ರೈಲ್ವೆ ಸಂರಕ್ಷಣಾ ಪಡೆ (ಆರ್‌ಪಿಎಫ್) ಇನ್‌ಸ್ಪೆಕ್ಟರ್ ಸೋನು ಕುಮಾರ್ ಸಿಂಗ್ ಅವರು ಹಾನಿಯನ್ನು ಖಚಿತಪಡಿಸಿದ್ದಾರೆ. ಹಾನಿಗೊಳಗಾದ ಕಿಟಕಿಗಳ ದೃಶ್ಯಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.
ಇನ್ನು ದಾಳಿಯ ನಡುವೆಯೂ ವಂದೇ ಭಾರತ್ ಎಕ್ಸ್‌ಪ್ರೆಸ್ ಅಯೋಧ್ಯೆಯಿಂದ ಲಖನೌಗೆ ಪ್ರಯಾಣ ಮುಂದುವರೆಸಿದೆ. ಈ ಬಗ್ಗೆ ಹೆಚ್ಚಿನ ತನಿಖೆಗಾಗಿ ಅಯೋಧ್ಯೆ ಕಂಟೋನ್ಮೆಂಟ್ ಆರ್‌ಪಿಎಫ್ ಪೋಸ್ಟ್‌ಗೆ ತ್ವರಿತವಾಗಿ ವರದಿ ಮಾಡಲಾಗಿದೆ. ರೈಲ್ವೆ ಅಧಿಕಾರಿಗಳು ಪ್ರಯಾಣಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣ ಕ್ರಮ ಕೈಗೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಲ್ಲು ತೂರಾಟ ನಡೆಸಿದ ಆರೋಪಿ ಪಾಸ್ವಾನ್ ಮತ್ತು ಆತನ ಪುತ್ರರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆ ಮತ್ತು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಸುಗಮ ಕಾರ್ಯಾಚರಣೆಗಾಗಿ ಪೊಲೀಸರು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ.