ನಾಗರಿಕ ಸಮಾಜ ತಲೆತಗ್ಗಿಸುವಂತಹ ಮತ್ತೊಂದು ಘಟನೆಯೊಂದು ಉತ್ತರ ಪ್ರದೇಶದಿಂದ ವರದಿಯಾಗಿದೆ. ಶಾಲೆಯಿಂದ ಮನೆಗೆ ಮರಳುತ್ತಿದ್ದ 14 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಮೀರತ್ ಜಿಲ್ಲೆಯ ಪರಿಕ್ಷಿತ್ಗರ್ ಎಂಬಲ್ಲಿ ಈ ಘಟನೆ ಸಂಭವಿಸಿದೆ. ಬಾಲಕಿಯನ್ನು ಜಮೀನಿನ ಬಳಿ ಎಳೆದೊಯ್ದ ಯುವಕರ ಗುಂಪು ಸಾಮೂಹಿಕ ಅತ್ಯಾಚಾರವೆಸಗಿದೆ.
ಬಾಲಕಿಯು ಸಹಾಯಕ್ಕೆ ಕೂಗುತ್ತಿದ್ದಂತೆಯೇ ಮೂವರು ಯುವಕರು ಬೈಕ್ ಏರಿ ಪರಾರಿಯಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡ ಸ್ಥಳಕ್ಕೆ ಧಾವಿಸಿದೆ. ಮೂವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.
9ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಬಾಲಕಿಯು ತನ್ನ ಸ್ನೇಹಿತರ ಜೊತೆ ಶಾಲೆಯಿಂದ ಮನೆಗೆ ಮರಳುತ್ತಿದ್ದಳು. ಈ ವೇಳೆ ಆಕೆಯ ಗ್ರಾಮದ ಯುವಕ ಬೈಕಿನಲ್ಲಿ ಬಂದು ನಿನ್ನ ತಾಯಿಗೆ ಅನಾರೋಗ್ಯವುಂಟಾಗಿದೆ ಎಂದು ಸುಳ್ಳು ಹೇಳಿದ್ದ. ಇದನ್ನೇ ನಂಬಿದ ಬಾಲಕಿ ತಾಯಿಯನ್ನು ನೋಡಲು ಆತನ ಬೈಕ್ ಏರಿದ್ದಳು. ಆದರೆ ಆತ ಆಕೆಯನ್ನು ಬೈಕಿನಲ್ಲಿ ಜೈಸಿಂಗಪುರ ಗ್ರಾಮದ ಜಮೀನಿಗೆ ಕರೆದೊಯ್ದಿದ್ದ.
ನಿರ್ಜನ ಪ್ರದೇಶದಲ್ಲಿ ಆಗಲೇ ಇಬ್ಬರು ಯುವಕರು ಇದ್ದರು. ಮೂವರು ಸೇರಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರಗೈದಿದ್ದಾರೆ. ಬಾಲಕಿಯು ಕೂಗಿದ ಶಬ್ದ ಕೇಳಿ ಜಮೀನು ಮಾಲೀಕ ಸಹಾಯಕ್ಕೆ ಧಾವಿಸುವುದರೊಳಗಾಗಿ ಮೂವರು ಅಲ್ಲಿಂದ ಪರಾರಿಯಾಗಿದ್ದರು.