ಶಾಮ್ಲಿ: ಬೇರೆ ಜಾತಿಯ ಯುವಕನೊಂದಿಗೆ ಸಂಬಂಧ ಹೊಂದಿದ್ದಕ್ಕಾಗಿ 18 ವರ್ಷದ ಹುಡುಗಿಯನ್ನು ಆಕೆಯ 56 ವರ್ಷದ ತಂದೆ ಕೊಲೆ ಮಾಡಿದ ಘಟನೆ ಉತ್ತಪ್ರದೇಶದ ಶಾಮ್ಲಿ ಜಿಲ್ಲೆ ಹಳ್ಳಿಯಲ್ಲಿ ನಡೆದಿದೆ.
ಆರೋಪಿಯನ್ನು ಬಂಧಿಸಲಾಗಿದ್ದು, ಆತನನ್ನು ರೈತ ಪ್ರಮೋದ್ ಕುಮಾರ್ ಎಂದು ಗುರುತಿಸಲಾಗಿದೆ. ಶಾಮ್ಲಿ ಪೊಲೀಸ್ ಸೂಪರಿಂಟೆಂಡೆಂಟ್ ಅಭಿಷೇಕ್, ವಿಚಾರಣೆಯ ಸಮಯದಲ್ಲಿ ರೈತ ಪ್ರಮೋದ್ ಕುಮಾರ್ ತನ್ನ ಮಗಳನ್ನು ಕತ್ತು ಹಿಸುಕಿ ಕೊಂದು ದೇಹಕ್ಕೆ ಬೆಂಕಿ ಹಚ್ಚಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದರು.
ಪ್ರಮೋದ್ ಮೇಲ್ಜಾತಿಯ ವ್ಯಕ್ತಿಯಾಗಿದ್ದು, ತನ್ನ ಮಗಳು – ಕಾಜಲ್ ಹಿಂದುಳಿದ ಜಾತಿಯ ಯುವಕ ಅಜಯ್ ಕಶ್ಯಪ್ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಲು ನಿರಾಕರಿಸಿದ್ದರಿಂದ ಕೊಲೆ ಮಾಡಿದ್ದಾನೆ. ತನ್ನ ಮಗಳಿಗೆ ಅಜಯ್ ಜೊತೆ ಸಂಬಂಧ ಬ್ರೇಕ್ ಅಪ್ ಮಾಡಲು ಹಲವು ಬಾರಿ ಎಚ್ಚರಿಕೆ ನೀಡಿದರೂ ಅವಳು ಕೇಳಲಿಲ್ಲ. ಹೀಗಾಗಿ ಕೊಲೆ ಮಾಡಿದ್ದಾನೆ.
ಝಿಝಾನಾ ಪೊಲೀಸ್ ಠಾಣೆಯ ಎಸ್‌ಹೆಚ್‌ಒ ಪಂಕಜ್ ತ್ಯಾಗಿ, ಪ್ರಮೋದ್ ಅವರ ಮಗಳು ಇತ್ತೀಚೆಗೆ 20 ವರ್ಷದ ಯುವಕನೊಂದಿಗೆ ಕುಟುಂಬಕ್ಕೆ ತಿಳಿಸದೆ ಮನೆಯಿಂದ ಹೊರಟು ಹೋಗಿದ್ದಳು. ನಂತರ ಸಾಮಾಜಿಕ ಕಳಂಕದ ಭಯದಿಂದ ಅವಳನ್ನು ಕೊಲ್ಲಲು ಪ್ರಮೋದ್ ನಿರ್ಧರಿಸಿ ಸೆಪ್ಟೆಂಬರ್ 9 ಮತ್ತು ಸೆಪ್ಟೆಂಬರ್ 10 ರ ರಾತ್ರಿ ಯಾವುದೋ ಕೆಲಸದ ನೆಪದಲ್ಲಿ ಹೊಲಕ್ಕೆ ಕರೆದೊಯ್ದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ ನಂತರ ಆಕೆಯ ಶವವನ್ನು ಸುಟ್ಟು ಹಾಕಿದ್ದಾನೆ.
ಮನೆಗೆ ಮರಳಿದ ನಂತರ, ಮಗಳನ್ನು ಪಾಣಿಪತ್‌ನಲ್ಲಿ ತನ್ನ ಸಹೋದರನೊಂದಿಗೆ ಬಿಟ್ಟು ಬಂದಿರುವುದಾಗಿ ಪ್ರಮೋದ್ ತನ್ನ ಕುಟುಂಬಕ್ಕೆ ತಿಳಿಸಿದ್ದಾನೆ.
ಹೊಲದ ಮಾಲೀಕ ಶುಕ್ರವಾರ ರಾತ್ರಿ ಹೊಲದಲ್ಲಿ ಶವ ಸುಟ್ಟು ಕರಕಲಾಗಿರುವ ಬಗ್ಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಮಾಹಿತಿ ನೀಡಿದ್ದು, ಪೊಲೀಸ್ ಶ್ವಾನದಳ ಹಾಗೂ ವಿಧಿವಿಜ್ಞಾನ ತಜ್ಞರ ತಂಡ ಸ್ಥಳಕ್ಕೆ ಭೇಟಿ ಚಿತಾಭಸ್ಮದಿಂದ ಮೂಳೆಗಳನ್ನು ಹೊರತೆಗೆದು ಪರೀಕ್ಷೆಗೆ ಕಳಿಸಿದೆ. ತನಿಖೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.