ಹಿಂದೂ ಪರಂಪರೆಯಲ್ಲಿ ಮನುಷ್ಯರು ಸತ್ತಾಗ 13ನೇ ದಿನ ಕಾರ್ಯ ಮಾಡುವುದು ಸಾಮಾನ್ಯ. ಆದರೆ, ಇಲ್ಲೊಂದು ಹುಂಜ ಪ್ರಾಣ ತ್ಯಾಗ ಮಾಡಿದ ನೆನಪಲ್ಲಿ ವೈಕುಂಠ ಸಮಾರಾಧನೆ ಮಾಡಲಾಗಿದೆ. ಉತ್ತರ ಭಾರತದ ಕಡೆ ಈ ವೈಕುಂಠ ಸಮಾರಾಧನೆಯನ್ನು ತೆರೆವೀ(13ನೇ ದಿನ) ಎಂದು ಕರೆಯುವುದುಂಟು.
ಅಂದಹಾಗೆ ಕೋಳಿಗೂ ಈ ಕಾರ್ಯಕ್ರಮವೇ ಎಂದು ಕೇಳಿದರೆ ಅಲ್ಲೊಂದು ಅಚ್ಚರಿ ಇದೆ. ನಾಯಿಯಿಂದ ಕುರಿಮರಿಯನ್ನು ಉಳಿಸುವ ಪ್ರಯತ್ನದಲ್ಲಿ ಹುಂಜ ಪ್ರಾಣಾರ್ಪಣೆ ಮಾಡಿತ್ತು. ಹೀಗಾಗಿ ಹುಂಜದ ಮಾಲೀಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 500ಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು.
ಉತ್ತರ ಪ್ರದೇಶದ ಪ್ರತಾಪ್ಗಢ ಜಿಲ್ಲೆಯಲ್ಲಿ ಈ ಟನೆ ನಡೆದಿದ್ದು, ಜುಲೈ 7ರಂದು ಕುರಿಮರಿಯನ್ನು ಕಾವಲು ಕಾಯಲು ಮನೆಯ ಹಿತ್ತಲಿನಲ್ಲಿ ಕೋಳಿಯನ್ನು ಬಿಟ್ಟಿದ್ದಾಗ ಬೀದಿ ನಾಯಿ ಆ ಆವರಣಕ್ಕೆ ನುಗ್ಗಿ ದಾಳಿ ನಡೆಸಿತ್ತು. ಕೆಲಕಾಲ ಕಿರುಚಾಟದ ಶಬ್ದ ಕೇಳಿ ಮನೆಯ ಮುಂಭಾಗದಲ್ಲಿದ್ದ ಮಾಲೀಕನ ಕುಟುಂಬಸ್ಥರು ಸ್ಥಳಕ್ಕೆ ಧಾವಿಸಿ ನೋಡಿದಾಗ ಬೀದಿ ನಾಯಿ ಆವರಣಕ್ಕೆ ನುಗ್ಗಿತ್ತು. ನಾಯಿಯು ಕುರಿಮರಿಯ ಮೇಲೆ ದಾಳಿ ಮಾಡುತ್ತಿದ್ದಂತೆ, ಲಾಲಿ ಹೆಸರಿನ ಹುಂಜ ಕುರಿಮರಿಯ ರಕ್ಷಣೆಗೆ ಜಿಗಿದು ಅದರೊಂದಿಗೆ ಹೋರಾಡಲು ಪ್ರಾರಂಭಿಸಿತ್ತು.
ಹುಂಜವು ನಾಯಿಯನ್ನು ಮನೆಯಿಂದ ಓಡಿಸುವಲ್ಲಿ ಯಶಸ್ವಿಯಾಗಿದೆ, ಆದರೆ ಇತರ ನಾಯಿಗಳು ಸಹ ದಾಳಿ ಮಾಡಿದ್ದರಿಂದ ಹುಂಜ ಗಂಭೀರ ಗಾಯಗೊಂಡು, ಮರು ದಿನ ಬಲಿಯಾಯಿತು. ಮನೆಯ ಋಣ ತೀರಿಸಲು ಹೋರಾಡಿ ಸಾವಿಗೀಡಾದ ಹುಂಜವನ್ನು ಮಾನವನ ಮರಣದ ನಂತರ ಆಚರಿಸಲಾಗುವ ಆಚರಣೆಗಳೊಂದಿಗೆ ಮನೆಯ ಸಮೀಪದಲ್ಲಿ ಹೂಳಲಾಯಿತು.
ವಿಧಿವಿಧಾನಗಳನ್ನು ನಿರ್ವಹಿಸುವಾಗ, ಮಾಲೀಕರು ಕೋಳಿಯ ಆತ್ಮಕ್ಕೆ ಶಾಂತಿಗಾಗಿ ತೇರವಿ ಸಮಾರಂಭವನ್ನು ನಡೆಸಲು ಪ್ರಸ್ತಾಪಿಸಿದರು. ಆ ಪ್ರಕಾರ 13ನೇ ದಿನ ನಡೆದ ಕಾರ್ಯಕ್ರಮದಲ್ಲಿ 500ಕ್ಕೂ ಮಂದಿ ಹಾಜರಾಗಿದ್ದರು.