ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿರುದ್ಧ ಕರ್ಹಾಲ್ ವಿಧಾನ ಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ, ಬಿಜೆಪಿ ಅಭ್ಯರ್ಥಿ ಹಾಗೂ ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಅವರ ಮೇಲೆ ಮಂಗಳವಾರ ರಾತ್ರಿ ದಾಳಿಯಾಗಿದೆ.
ಅವರ ಬೆಂಗಾವಲು ಪಡೆಯ ಮೇಲೆ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ವ್ಯಾಪ್ತಿಯ ಅತ್ತಿಕುಲ್ಲಾಪುರ ಗ್ರಾಮದ ಬಳಿ ನಿನ್ನೆ ಸಂಜೆ ಕಲ್ಲು ಮತ್ತು ದೊಣ್ಣೆಗಳಿಂದ ದಾಳಿ ನಡೆಸಲಾಗಿದೆ. ಮೈನ್‌ಪುರಿ ಮತ್ತು ಕರ್ಹಾಲ್ ಪ್ರದೇಶಗಳನ್ನು ಸಮಾಜವಾದಿ ಪಕ್ಷದ ಭದ್ರಕೋಟೆ ಎಂದು ಹೇಳಲಾಗುತ್ತದೆ.
ಇನ್ನು, ಈ ಸಂಬಂಧ ಮೈನ್‌ಪುರಿ ಪೊಲೀಸರು ಹಲ್ಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಧ್ಯ ಎಸ್ಪಿ ಸಿಂಗ್ ಬಘೇಲ್ ಅವರು ಸುರಕ್ಷಿತವಾಗಿದ್ದು, ಅವರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಬಘೇಲ್, ನಾನು ಪ್ರಚಾರ ಮುಗಿಸಿ ಹಿಂತಿರುಗುತ್ತಿದ್ದಾಗ ಅತ್ತಿಕುಲ್ಲಾಪುರ ಗ್ರಾಮದ ಬಳಿ ಕೆಲವರು ನಮ್ಮ ಕಾರುಗಳ ಮೇಲೆ ದಾಳಿ ಮಾಡಿದರು. ಕಲ್ಲು ದೊಣ್ಣೆಗಳ ಮೂಲಕ ದಾಳಿ ಮಾಡಿದ ಅವರು ಅಖಿಲೇಶ್ ಭಯ್ಯಾ ಜಿಂದಾಬಾದ್ ಎಂಬ ಘೋಷಣೆಗಳನ್ನು ಕೂಗಿದರು. ನಾವು ಈ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದಿದ್ದಾರೆ.
ವಿದೇಶದಲ್ಲೂ ಅಭಿಮಾನಿ ಬಳಗ ಹೊಂದಿದ್ದ ಬಪ್ಪಿ ಲಹರಿ….! ರಷ್ಯಾದಲ್ಲಿ ಫೇಮಸ್ ಆಗಿದ್ದ ʼಜಿಮ್ಮಿ ಜಿಮ್ಮಿʼ ಹಾಡು
ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಅವರಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಝಡ್ ಕೆಟಗರಿ ಭದ್ರತೆ ಒದಗಿಸಿದೆ ಎಂದು ಗೃಹ ಸಚಿವಾಲಯದ ಮೂಲಗಳು ಇಂದು ತಿಳಿಸಿವೆ. ಅವರಿಗೆ ಫೆಬ್ರವರಿ 11 ರಂದು ಕೇಂದ್ರ ಸರ್ಕಾರದ ಸಶಸ್ತ್ರ ಭದ್ರತೆಯನ್ನು ನೀಡಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಬಘೇಲ್ ಅವರ ಬೆಂಗಾವಲು ವಾಹನದ ಮೇಲೆ ಸಮಾಜವಾದಿ ಪಕ್ಷದ ಗೂಂಡಾಗಳು ದಾಳಿ ನಡೆಸಿದ್ದಾರೆ ಎಂದು ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಆರೋಪಿಸಿದ್ದಾರೆ. ಕೇಂದ್ರ ಸಚಿವ ಎಸ್‌ಪಿ ಸಿಂಗ್ ಬಘೇಲ್ ಅವರ ಬೆಂಗಾವಲು ವಾಹನದ ಮೇಲೆ ಸಮಾಜವಾದಿ ಪಕ್ಷದ ಗೂಂಡಾಗಳು ನಡೆಸಿದ ದಾಳಿಯು ಪಕ್ಷದ ನೈಜ ಸ್ವರೂಪವನ್ನು ತೋರಿಸುತ್ತದೆ ಎಂದು ಮೌರ್ಯ ಟ್ವೀಟ್ ಮಾಡಿದ್ದಾರೆ.
ನಿನ್ನೆ ಬಿಜೆಪಿ ಸಂಸದೆ ಗೀತಾ ಶಾಕ್ಯಾ ಅವರ ಮೇಲೂ ಹಲ್ಲೆ ನಡೆದಿದೆ. ಎರಡೂ ಘಟನೆಗಳ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಖಿಲೇಶ್ ಯಾದವ್ ಅವರು ತಮ್ಮ ಭದ್ರಕೋಟೆಯಾದ ಕರ್ಹಾಲ್‌ನಲ್ಲಿ ಸೋಲುವ ಭಯದಿಂದ ಬಘೇಲ್ ಮತ್ತು ಇತರ ಬಿಜೆಪಿ ನಾಯಕರ ಮೇಲೆ ‘ಅವರು ಸಾಕಿರುವ ಗೂಂಡಾಗಳ’ ಮೂಲ ದಾಳಿ ನಡೆಸಿದ್ದಾರೆ ಎಂದು ಮೌರ್ಯ ಆರೋಪಿಸಿದ್ದಾರೆ.