ನವದೆಹಲಿ: ಉತ್ತರ ಪ್ರದೇಶದಲ್ಲಿ ಹೀನಾಯ ಸೋಲು ಕಂಡಿರುವ ಕಾಂಗ್ರೆಸ್ ಸ್ಪರ್ಧಿಸಿದ್ದ 399 ಸ್ಥಾನಗಳ ಪೈಕಿ 387ರಲ್ಲಿ ಠೇವಣಿ ಕಳೆದುಕೊಂಡಿದೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್ ಕೇವಲ 2 ಸ್ಥಾನಗಳನ್ನು ಗೆದ್ದಿದೆ. ಎಲ್ಲಾ 403 ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿಎಸ್‌ಪಿ 290 ರಲ್ಲಿ ಠೇವಣಿ ಕಳೆದುಕೊಂಡಿದೆ. ಬಿಜೆಪಿ 376 ಸ್ಥಾನಗಳಲ್ಲಿ ಸ್ಪರ್ಧಿಸಿ 3ರಲ್ಲಿ ಠೇವಣಿ ಕಳೆದುಕೊಂಡರೆ, ಎಸ್‌ಪಿ 347 ಸ್ಥಾನಗಳಲ್ಲಿ ಸ್ಪರ್ಧಿಸಿ 6ರಲ್ಲಿ ಠೇವಣಿ ಕಳೆದುಕೊಂಡಿದೆ.
ಆದಾಗ್ಯೂ ಬಿಜೆಪಿಯ ಮಿತ್ರಪಕ್ಷಗಳಾದ ಅಪ್ನಾ ದಳ(ಎಸ್) ಮತ್ತು ನಿಶಾದ್ ಪಕ್ಷಗಳು ತಮ್ಮ ನಡುವೆ ಸ್ಪರ್ಧಿಸಿದ 27 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿಲ್ಲ. ಎಸ್‌ಪಿಯ ಪಾಲುದಾರರಾದ ಎಸ್‌ಬಿಎಸ್‌ಪಿ ಮತ್ತು ಅಪ್ನಾ ದಳ(ಕೆ) 25 ಸ್ಥಾನಗಳಲ್ಲಿ ಸ್ಪರ್ಧಿಸಿ 8ರಲ್ಲಿ ಠೇವಣಿ ಕಳೆದುಕೊಂಡಿದ್ದಾರೆ. ಒಟ್ಟಾರೆಯಾಗಿ 4,442 ಅಭ್ಯರ್ಥಿಗಳು ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಮತ್ತು 3,552 ಮಂದಿ ಠೇವಣಿ ಕಳೆದುಕೊಂಡಿದ್ದಾರೆ. ಒಂದು ಕ್ಷೇತ್ರದಲ್ಲಿ ಚಲಾವಣೆಯಾದ ಒಟ್ಟು ಮಾನ್ಯವಾದ ಮತಗಳ ಆರನೇ ಒಂದು ಭಾಗವನ್ನು ಪಡೆಯಲು ವಿಫಲವಾದಾಗ ಅಭ್ಯರ್ಥಿಯು ಠೇವಣಿ ಕಳೆದುಕೊಳ್ಳುತ್ತಾನೆ ಎಂದು ನಿಯಮಗಳು ಹೇಳುತ್ತವೆ.
2017ರಲ್ಲಿ ಆರು ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ವರ್ಷ ಕೇವಲ ಎರಡರಷ್ಟು ಸ್ಥಾನ ಗಳಿಸಿದೆ. ಹಿಂದಿನ ಚುನಾವಣೆಗಳಲ್ಲಿ ಶೇಕಡ 6.1 ಕ್ಕೆ ಹೋಲಿಸಿದರೆ ಮತ ಹಂಚಿಕೆಯು ಶೇಕಡಾ 2.4 ಕ್ಕೆ ಇಳಿದಿದೆ. ಈ ಅಂಕಿಅಂಶಗಳು ಕಾಂಗ್ರೆಸ್‌ನ ಸ್ಟ್ರೈಕ್ ರೇಟ್ ಕೇವಲ 0.5 ಶೇಕಡ ಎಂದು ಸೂಚಿಸುತ್ತದೆ.
ಪ್ರಿಯಾಂಗಾ, ರಾಹುಲ್ ಗಾಂಧಿ ಪ್ರಚಾರ ನಡೆಸಿದರೂ, ಭದ್ರಕೋಟೆಗಳಾದ ರಾಯ್ ಬರೇಲಿ ಮತ್ತು ಅಮೇಥಿಗಳಲ್ಲಿ ನಿರೀಕ್ಷಿತ ಗೆಲುವು ಸಾಧ್ಯವಾಗಲಿಲ್ಲ.
ಅಲ್ಲಿ ಕಾಂಗ್ರೆಸ್ ಅಧ್ಯಕ್ಷ ಮತ್ತು ತಮ್ಕುಹಿ ರಾಜ್ ನಿಂದ ಎರಡು ಬಾರಿ ಶಾಸಕರಾಗಿದ್ದ ಅಜಯ್ ಲಲ್ಲು ಕೂಡ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಬಿಜೆಪಿ-ನಿಶಾದ್ ಪಕ್ಷದ ಅಭ್ಯರ್ಥಿ ಅಸೀಮ್ ಕುಮಾರ್ ಗಳಿಸಿದ 1.15 ಲಕ್ಷ ಮತಗಳಿಗೆ ಹೋಲಿಸಿದರೆ ಲಲ್ಲು 30,000 ಮತಗಳನ್ನು ಪಡೆದರು.
ಒಟ್ಟಾರೆಯಾಗಿ ಕಾಂಗ್ರೆಸ್ 159 ಮಹಿಳಾ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಕಾಂಗ್ರೆಸ್‌ನ ಒಬ್ಬ ಮಹಿಳಾ ಅಭ್ಯರ್ಥಿ ಆರಾಧನಾ ಮಿಶ್ರಾ ಮೋನಾ ಗೆದ್ದರು. ವೀರೇಂದ್ರ ಚೌಧರಿ ಅವರು ಫರೆಂಡಾ ಕ್ಷೇತ್ರದಿಂದ ಕಾಂಗ್ರೆಸ್‌ನ ಎರಡನೇ ವಿಜೇತರಾಗಿದ್ದಾರೆ. ಅವರು ಬಿಜೆಪಿಯ ಬಜರಂಗ್ ಬಹದ್ದೂರ್ ಸಿಂಗ್ ಅವರನ್ನು ಕೇವಲ 1,078 ಮತಗಳಿಂದ ಸೋಲಿಸಿದರು.