ದೇಶದಲ್ಲೇ ಅತಿದೊಡ್ಡ ರಾಜ್ಯ ಎಂಬ ಖ್ಯಾತಿಯ ಉತ್ತರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆಯ ಬಿಸಿ ದಿನೇ ದಿನೇ ಹೆಚ್ಚುತ್ತಿದೆ.
ಬಿಜೆಪಿ ಮತ್ತು ಸಮಾಜವಾದಿ ಪಕ್ಷ ಗಳು ಪ್ರಬಲ ಪೈಪೋಟಿಯಲ್ಲಿ ನಿರತವಾಗಿವೆ. ಉಳಿದಂತೆ ಸಣ್ಣಪುಟ್ಟ ಪ್ರದೇಶಗಳಿಗೆ ಸೀಮಿತವಾಗಿರುವ ಪ್ರಾದೇಶಿಕ ಪಕ್ಷ ಗಳು ಈ ಬಾರಿ ಸಿಎಂ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಪಡೆಯ ನೇತೃತ್ವ ವಹಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್‌ಗೆ ಬೆಂಬಲ ಸೂಚಿಸಿವೆ.
ಅಖಿಲೇಶ್ ಯಾದವ್ ಅವರು ಕೂಡ ಜಾತಿ ಸಮೀಕರಣವನ್ನು ಚೆನ್ನಾಗಿ ಅರ್ಥಮಾಡಿಕೊಂಡು ಬಹುಸಂಖ್ಯಾತರಾದ ಬ್ರಾಹ್ಮಣರು, ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯಗಳ ಮತಗಳನ್ನು ಸೆಳೆಯಲು ಯಾವುದೇ ಕಡಿಮೆ ಕಸರತ್ತು ಮಾಡುತ್ತಿಲ್ಲ.
ಇಂಥದ್ದರ ನಡುವೆ ಬಾರಾಬಂಕಿ ಜಿಲ್ಲೆಯ ಕಾಕ್ರಿಯಾ ಗ್ರಾಮದಲ್ಲಿ ಒಂದು ಕುಟುಂಬದ ಪೂಜಾ ವಿಧಾನವು ರಾಜ್ಯಾದ್ಯಂತ ಚರ್ಚೆಯ ವಿಷಯವಾಗಿದೆ. ಮನೆಯಲ್ಲಿರುವ ದೇವರ ಕೋಣೆಯಲ್ಲಿ ಭಗವಾನ್ ವಿಷ್ಣುವಿನ ಬದಲು ಅಖಿಲೇಶ್ ಯಾದವ್ ಅವರ ಫೋಟೊವನ್ನು ಕುಟುಂಬಸ್ಥರು ಇರಿಸಿದ್ದಾರೆ. ವಿಷ್ಣುವಿನ ಫೋಟೊ ತೆಗೆದುಕೊಂಡು, ಅದರ ತಲೆಯ ಭಾಗದಲ್ಲಿ ಅಖಿಲೇಶ್ ಯಾದವ್ ಅವರು ಎಸ್‌ಪಿಯ ಕೆಂಪು ಟೋಪಿ ಧರಿಸಿರುವ ಫೋಟೊ ಲಗತ್ತಿಸಿದ್ದಾರೆ. ಇದಕ್ಕೆ ದಿನನಿತ್ಯ ಪೂಜೆ ಮಾಡಿ, ಊದುಬತ್ತಿ ಹಚ್ಚುತ್ತಾರಂತೆ.
ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ಪ್ರಶ್ನಿಸಿದ್ದಕ್ಕೆ ಕುಟುಂಬದ ಹಿರಿಯನ ಪ್ರಕಾರ, ’’ಸಮಾಜವಾದಿ ಪಕ್ಷದ ಸರಕಾರ ರಚನೆಯಾಗಬೇಕು ಎನ್ನುವುದು ನಮ್ಮ ಪ್ರಾರ್ಥನೆ. ಕಲಿಯುಗದಲ್ಲಿ ಕಷ್ಟಗಳಿಂದ ನಮ್ಮನ್ನು ಪಾರು ಮಾಡಲು ಸಾಧ್ಯವಿರುವುದು ಅಖಿಲೇಶ್ ಯಾದವ್ ಅವರಿಗೆ ಮಾತ್ರ. ಹಾಗಾಗಿಯೇ ಹನುಮಂತ ದೇವರು ಮತ್ತು ದುರ್ಗೆಯ ಫೋಟೊಗಳ ನಡುವೆ ಅಖಿಲೇಶ್ ಅವರು ವಿಷ್ಣುವಿನ ಅವತಾರದಲ್ಲಿರುವ ಫೋಟೊ ಇರಿಸಿದ್ದೇವೆ,’’ ಎಂದಿದ್ದಾರೆ.
ನಾವು ಹೀಗೆ ಆರಾಧಿಸುವುದನ್ನು ಬಿಜೆಪಿ ನೇತೃತ್ವದ ಸರಕಾರ ಸಹಿಸದೆಯೇ ಪೊಲೀಸ್ ದಾಳಿ ನಡೆಸುವ ಭಯವಿದೆ. ಹಾಗಾಗಿ ಇಷ್ಟು ದಿನ ಗೌಪ್ಯವಾಗಿ ಇರಿಸಿದ್ದೆವು ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.