ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ವಿವಿಧ ಹಂತಗಳಲ್ಲಿ ಮತದಾನ ನಡೆದಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹಠತೊಟ್ಟು ಕೆಲಸ ಮಾಡುತ್ತಿದ್ದರೆ, ಬಿಜೆಪಿಯನ್ನು ಸೋಲಿಸಿ ಮರಳಿ ಅಧಿಕಾರಕ್ಕೇರಲು ಸಮಾಜವಾದಿ ಪಕ್ಷ ಹಾತೊರೆಯುತ್ತಿದೆ. ಈ ಎರಡು ಪಕ್ಷಗಳ ನಡುವೆ ರಾಜಕೀಯ ದಾಳಗಳು ಉರುಳುತ್ತಿವೆ.
ಅಚ್ಚರಿ ಬೆಳವಣಿಗೆಯಲ್ಲಿ ಬಿಜೆಪಿ ಸಂಸದರಾದ ರೀಟಾ ಬಹುಗುಣ ಜೋಶಿ ಪುತ್ರ ಮಯಾಂಕ್, ಎಸ್.ಪಿ. ಮುಖ್ಯಸ್ಥ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿದರು.
ಏಳು ಹಂತದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನಕ್ಕೆ ಒಂದು ದಿನ ಮೊದಲು ಅಖಿಲೇಶ್ ಯಾದವ್ ಅವರನ್ನು ಬಿಜೆಪಿ ಸಂಸದರ ಪುತ್ರ ಭೇಟಿಯಾಗಿರುವುದು ಚರ್ಚೆಗೆ ಕಾರಣವಾಗಿದೆ.
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ತೃತೀಯ ಲಿಂಗಿ ಅಭ್ಯರ್ಥಿ ಜಯಭೇರಿ
ಯಾದವ್ ಅವರು ಮಯಾಂಕ್ ಜೋಶಿಯನ್ನು ಭೇಟಿಯಾದ ಫೋಟೋವನ್ನು ಟ್ವೀಟ್ ಮಾಡಿ, ಇದೊಂದು ಅನೌಪಚಾರಿಕ ಸಭೆಯಷ್ಟೇ ಎಂದು ಹೇಳಿಕೊಂಡಿದ್ದಾರೆ. ಆದರೆ, ರಾಜಕೀಯ ಸಂದೇಶ ಕಳಿಸಿರುವುದು ಕಾಣಿಸಿದೆ.
ರೀಟಾ ಬಹುಗುಣ ಜೋಶಿ ಪ್ರಯಾಗ್‌ರಾಜ್‌ನಿಂದ ಲೋಕಸಭಾ ಸಂಸದರಾಗಿದ್ದಾರೆ ಮತ್ತು ತಮ್ಮ ಮಗನನ್ನು ಲಕ್ನೋ ಕಂಟೋನ್ಮೆಂಟ್ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಘೋಷಿಸಲು ಪ್ರಯತ್ನಿಸಿದ್ದರು. ಆದರೆ, ಬಿಜೆಪಿಯು ಸಚಿವ ಬ್ರಿಜೇಶ್ ಪಾಠಕ್‌ಗೆ ಟಿಕೆಟ್ ನೀಡಿತು.
ಇವರಿಬ್ಬರ ಸಭೆಯಲ್ಲಿ ಏನು ಚರ್ಚೆಯಾಗಿದೆ ಎಂಬುದು ತಿಳಿದುಬಂದಿಲ್ಲ. ರೀಟಾ ಬಹುಗುಣ ಜೋಶಿ 2012 ರಲ್ಲಿ ಕಾಂಗ್ರೆಸ್ ಟಿಕೆಟ್‌ನಲ್ಲಿ ಲಕ್ನೋ ಕಂಟೋನ್ಮೆಂಟ್‌ನಿಂದ ಶಾಸಕರಾಗಿ ಆಯ್ಕೆಯಾಗಿದ್ದರು.
2017 ರ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿ ಯಿಂದ ಸ್ಪರ್ಧಿಸಿ ಮುಲಾಯಂ ಸಿಂಗ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್‌ರನ್ನು ಸೋಲಿಸಿದರು. ಅಪರ್ಣಾ ಯಾದವ್ ಇತ್ತೀಚೆಗೆ ಬಿಜೆಪಿ ಸೇರಿದ್ದರು ಎಂಬುದೂ ಸಹ ಇಲ್ಲಿ ಗಮನಿಸಬೇಕಾದ ಸಂಗತಿ.