ಬಂಡಾ (ಉತ್ತರ ಪ್ರದೇಶ): ಹೆಚ್ಚಿನವರು ತಮ್ಮ ಸಾಕು ಪ್ರಾಣಿಗಳಾದ ನಾಯಿ, ಬೆಕ್ಕಿನ ಹುಟ್ಟುಹಬ್ಬ ಮಾಡುತ್ತಾರೆ. ತಮ್ಮ ಮಕ್ಕಳಿಗೆ ಮಾಡಿದಂತೆ ವಿಜೃಂಭಣೆಯಿಂದ ಹುಟ್ಟುಹಬ್ಬ ಆಚರಿಸಿ ಊರ ಮಂದಿಗೆ ಕರೆದು ಊಟ ಹಾಕುವವರೂ ಇದ್ದಾರೆ. ಆದರೆ ಇಲ್ಲೊಬ್ಬ ಉತ್ತರ ಪ್ರದೇಶದ ಬಂಡಾದಲ್ಲಿ ಮಕ್ಕಳಿಲ್ಲದ ದಂಪತಿ ಇತ್ತೀಚೆಗೆ ಮೇಕೆ ಮರಿಗಳ ಜನ್ಮದಿನವನ್ನು ವಿಜೃಂಭಣೆಯಿಂದ ಆಚರಿಸಿರುವ ಘಟನೆ ನಡೆದಿದೆ.
ಕಾನ್ಶಿರಾಮ್ ಕಾಲೋನಿಯಲ್ಲಿ ವಾಸಿಸುವ ದಂಪತಿ ತಮ್ಮ ಸಂಬಂಧಿಕರು ಮತ್ತು ಸ್ನೇಹಿತರನ್ನು ಆಹ್ವಾನಿಸಿ ಕೇಕ್ ಕತ್ತರಿಸಿ ಮೇಕೆ ಮರಿಗಳ ಜನ್ಮದಿನ ಆಚರಿಸಿದ್ದು, ಇದರ ವಿಡಿಯೋ ವೈರಲ್ ಆಗಿದೆ. ಅಷ್ಟೇ ಅಲ್ಲದೇ ಈ ವೇಳೆ ಡಾನ್ಸ್ ಜಾಕಿ (ಡಿಜೆ) ವ್ಯವಸ್ಥೆಯನ್ನೂ ಮಾಡಿಸಿ ಅಬ್ಬರದ ಸಂಗೀತ ಕಾರ್ಯಕ್ರಮ ನಡೆಸಿದರು.
ರಾಜಾ ಮತ್ತು ಅವರ ಪತ್ನಿ ಈ ಹುಟ್ಟುಹಬ್ಬ ಆಚರಿಸಿದ್ದಾರೆ. ಇವರಿಗೆ ಮದುವೆಯಾಗಿ ಹಲ ವರ್ಷಗಳಾಗಿದ್ದರೂ ಮಕ್ಕಳಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ಮನೆಯಲ್ಲಿ ಇರುವ ಮೇಕೆಯನ್ನೇ ಇವರು ಮಕ್ಕಳಂತೆ ಸಾಕುತ್ತಿದ್ದಾರೆ. ಒಂದು ಮೇಕೆ ಅವಳಿ ಮಕ್ಕಳಿಗೆ ಜನ್ಮ ನೀಡಿತ್ತು. ಅದಕ್ಕೀಗ ಒಂದು ವರ್ಷ. ಈ ಹಿನ್ನೆಲೆಯಲ್ಲಿ ಮೊದಲ ಹುಟ್ಟುಹಬ್ಬವನ್ನು ದಂಪತಿ ವಿಜೃಂಭಣೆಯಿಂದ ಆಚರಿಸಿದ್ದಾರೆ.
“ನಾವು ಪ್ರಾಣಿಗಳನ್ನು ನಮ್ಮ ಮಕ್ಕಳಂತೆ ನೋಡಿದ್ದೇವೆ ಮತ್ತು ನಾವು ಅವರ ಜನ್ಮದಿನವನ್ನು ಸಡಗರದಿಂದ ಆಚರಿಸಲು ನಿರ್ಧರಿಸಿದೆವು. ನಾವು ಈ ಮಕ್ಕಳಿಗೆ ಕುಬೇರ್ ಮತ್ತು ಲಕ್ಷ್ಮಿ ಎಂದು ಹೆಸರಿಸಿದ್ದೇವೆ, ದಿನವೂ ಇವುಗಳಿಗೆ ರಿಕ್ಷಾದಲ್ಲಿ ಸವಾರಿ ಮಾಡಲು ಕರೆದುಕೊಂಡು ಹೋಗುತ್ತೇನೆ“ ಎಂದು ರಾಜಾ ಈ ಸಮಯದಲ್ಲಿ ಹೇಳಿದರು.