ಕಾನ್ಪುರ: ವ್ಯಕ್ತಿಯೊಬ್ಬರು ತಮ್ಮ ಕಾಣೆಯಾದ ಪುತ್ರಿಯನ್ನು ಹುಡುಕಿಕೊಡುವಂತೆ ದೂರು ನೀಡಿದ್ರೆ, ಹುಡುಕಿ ಕೊಡಿಸುವ ನೆಪದಲ್ಲಿ ತಮ್ಮ ಸ್ವಂತ ಕೆಲಸಕ್ಕಾಗಿ ತಿನ್ನಲು, ಪ್ರಯಾಣಿಸಲು ಖರ್ಚಿನ ಹಣ ಕೇಳಿರುವ ಆರೋಪ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೇಳಿಬಂದಿದೆ.
ಕಾನ್ಪುರ ನಿವಾಸಿ ಸಂತೋಷ್ ಗೌತಮ್ ಎಂಬುವವರು ಪೊಲೀಸರ ವಿರುದ್ಧ ಆರೋಪಿಸಿದ್ದಾರೆ. ಕಾಣೆಯಾದ ತಮ್ಮ ಮಗಳನ್ನು ಹುಡುಕುವ ನೆಪದಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಟ್ಯಾಕ್ಸಿ ಮತ್ತು ಆಹಾರಕ್ಕಾಗಿ ಹಣ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಏನಾಗಿತ್ತು ಘಟನೆ?
ಜುಲೈ 1 ರಂದು ತನ್ನ 18 ವರ್ಷದ ಪುತ್ರಿ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ಠಾಣೆಯಲ್ಲಿ ಸಂತೋಷ್ ದೂರು ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದ ಉಪಠಾಣಾಧಿಕಾರಿ ಅಮಿತ್ ಮಲಿಕ್ ಅವರು ಪುತ್ರಿಯನ್ನು ಹುಡುಕಲು ಪ್ರಯಾಗರಾಜ್‌ಗೆ ಹೋಗಬೇಕು ಎಂದು ಹೇಳಿದ್ರಂತೆ. ಸಂತೋಷ್ ಪ್ರಯಾಗ್‌ರಾಜ್‌ಗೆ ಕ್ಯಾಬ್ ಬುಕ್ ಮಾಡಿ ಅಲಹಾಬಾದ್ ಹೈಕೋರ್ಟ್‌ಗೆ ಹೋಗಿದ್ದಾರೆ.
ಕ್ಯಾಬ್ ದರ, ಅದ್ಧೂರಿ ಊಟ ಮತ್ತು ದುಬಾರಿ ಹೋಟೆಲ್‌ನಲ್ಲಿ ಅತಿಥಿ ಸತ್ಕಾರಕ್ಕಾಗಿ ಸಂತೋಷ್‌ಗೆ ಮಗಳನ್ನು ಹುಡುಕುವ ಈ ಪ್ರಯಾಣವು ದುಬಾರಿಯಾಗಿತ್ತು. ಆದರೆ, ಸಂತೋಷ್ ಅವರ ಮಗಳ ಕಾಣೆಯಾದ ಬಗ್ಗೆ ಯಾವುದೇ ಮಾಹಿತಿ ಅಥವಾ ದಾರಿ ಹುಡುಕುವಲ್ಲಿ ಪೊಲೀಸ್ ಅಧಿಕಾರಿ ವಿಫಲರಾಗಿದ್ದಾರೆ. ಸುಮಾರು 20,000 ರೂ. ಖರ್ಚು ಮಾಡಿಸಿ, ಸಂತೋಷ್ ರನ್ನು ಪ್ರಯಾಗ್ ರಾಜ್ ನ್ಯಾಯಾಲಯಕ್ಕೆ ಕರೆದೊಯ್ದು ಹೊರಗೆ ನಿಲ್ಲಿಸಿದರಂತೆ.
ತನಿಖೆಯ ಪ್ರಗತಿಯ ಬಗ್ಗೆ ವಿಚಾರಿಸಿದಾಗ, ಇನ್ಸ್‌ಪೆಕ್ಟರ್ ಬೈದಿದ್ದಾರೆ ಎನ್ನಲಾಗಿದೆ. ಈ ವೇಳೆ ಸಂತೋಷ್ ಗೆ ಇನ್ಸ್ ಪೆಕ್ಟರ್ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ನ್ಯಾಯಾಲಯಕ್ಕೆ ಭೇಟಿ ನೀಡಿದ್ದರು ಎಂದು ತಿಳಿದಿದೆ. ಮಗಳನ್ನು ಹುಡುಕಿಕೊಡುವಂತೆ ಅಧಿಕಾರಿಯ ಮೇಲೆ ಒತ್ತಡ ಹೇರಿದಾಗ ಛೀಮಾರಿ ಹಾಕಿ ಕಳುಹಿಸಿದ್ರು ಎಂದು ಆರೋಪಿಸಿದ್ದಾರೆ. ಕಾನ್ಪುರದ ಪಂಕಿ ಪೊಲೀಸ್ ಠಾಣೆಗೆ ಮಗಳು ನಾಪತ್ತೆಯಾಗಿರುವ ಬಗ್ಗೆ ಸಂತೋಷ್ ದೂರು ನೀಡಿದ್ದರು.