ನವದೆಹಲಿ: ಕರ್ನಾಟಕದಲ್ಲಿ ಮಾತ್ರವಲ್ಲದೇ ಉತ್ತರಪ್ರದೇಶದಲ್ಲಿಯೂ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆದಿದೆ.
ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಮತ್ತು ರಾಧಾ ಮೋಹನ್ ಸಿಂಗ್ ಅವರು ಇತ್ತೀಚೆಗೆ ಲಕ್ನೋದಲ್ಲಿ ನಡೆಸಿದ ಸಭೆಯಲ್ಲಿ ಉತ್ತರಪ್ರದೇಶ ಬಿಜೆಪಿ ಶಾಸಕರು ಮತ್ತು ನಾಯಕರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಬದಲಾವಣೆ ಮಾಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂಬ ಸುದ್ದಿಗಳು ಹರಿದಾಡಿವೆ.
ಮುಖ್ಯಮಂತ್ರಿ ಸ್ಥಾನಕ್ಕೆ ಕೇಶವಪ್ರಸಾದ್ ಮೌರ್ಯ ಅವರನ್ನು ಪರಿಗಣಿಸುವ ಸಾಧ್ಯತೆಯಿದೆ. ಯೋಗಿ ಆದಿತ್ಯನಾಥ್ ಆಡಳಿತದಲ್ಲಿ ಅಧಿಕಾರಿಗಳು ಆಡಳಿತ ನಡೆಸುತ್ತಿದ್ದಾರೆ. ಉತ್ತರಪ್ರದೇಶ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಕಂಡು ಬಂದಿದೆ ಎನ್ನಲಾಗಿದ್ದರೂ, ಯೋಗಿ ಭ್ರಷ್ಟಾಚಾರ, ಸ್ವಜನ ಪಕ್ಷಪಾತಕ್ಕೆ ಅವಕಾಶ ನೀಡದೆ ಸ್ವಚ್ಛ ಆಡಳಿತ ನೀಡುತ್ತಿದ್ದಾರೆ. ಅವರನ್ನೇ ಮುಂದುವರೆಸಬೇಕೆಂಬ ಬಲವಾದ ಒತ್ತಡವೂ ಇದೆ.
ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯೋಗಿ ಆದಿತ್ಯನಾಥ ಬದಲಿಗೆ ಬೇರೆಯವರಿಗೆ ನೇತೃತ್ವ ವಹಿಸುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆದಿದೆ. ಯೋಗಿ ಆದಿತ್ಯನಾಥ್ ಅವರ ಸಾಮರ್ಥ್ಯದ ಬಗ್ಗೆ ಬಿಜೆಪಿ ವರಿಷ್ಠರಿಗೆ ಮೊದಲಿದ್ದ ವಿಶ್ವಾಸ ಇತ್ತೀಚೆಗೆ ಕಡಿಮೆಯಾಗಿದೆ ಎನ್ನಲಾಗಿದ್ದು, ಇವೆಲ್ಲ ಬೆಳವಣಿಗೆ ನಡುವೆ ನಾಯಕ ಯೋಗಿ ನಾಯಕತ್ವಕ್ಕೆ ಕುತ್ತು ಬಂದಿದೆ. ಹೀಗಾಗಿ ಅವರು ದೆಹಲಿಗೆ ದೌಡಾಯಿಸಿದ್ದಾರೆ ಎನ್ನಲಾಗಿದೆ.
ದೆಹಲಿಲ್ಲಿ ಯೋಗಿ ನಿನ್ನೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ. ಇಂದು ಪ್ರಧಾನಿ ಮೋದಿ ಮತ್ತು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರೊಂದಿಗೂ ಸಮಾಲೋಚನೆ ನಡೆಸಲಿದ್ದಾರೆ.