ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬೆಕ್ಕೊಂದನ್ನು ತಮ್ಮ ಮಡಿಲಲ್ಲಿರಿಸಿಕೊಂಡು ಆರೈಕೆ ಮಾಡುತ್ತಿರುವ ಫೋಟೋವೊಂದು ವೈರಲ್ ಆಗಿದ್ದು, ಜನರ ಮೆಚ್ಚುಗೆ ಗಳಿಸಿದೆ.
ವೈರಲ್ ಫೋಟೋದಲ್ಲಿ ಯೋಗಿಯವರು ಕಾವಿ ವಸ್ತ್ರ ಧರಿಸಿ ದಿವಾನದ ಮೇಲೆ ಕುಳಿತಿದ್ದಾರೆ, ಅವರ ಕಾಲ ಮೇಲೆ ಬೆಕ್ಕೊಂದು ಆರಾಮವಾಗಿ ಕುಳಿತಿರುವುದನ್ನು ನೋಡಬಹುದು. ಈ ಫೋಟೋವನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ ಯೋಗಿ ಆದಿತ್ಯನಾಥ್ ಅವರು. ‘ಪಶು ಪಕ್ಷಿಗಳಿಗೂ ಸ್ನೇಹಿತರು ಯಾರು ಶತ್ರುಗಳು ಯಾರು ಎಂಬುದರ ವ್ಯತ್ಯಾಸ ಗೊತ್ತಿದೆ ಎಂಬುದಾಗಿ ಬರೆದುಕೊಂಡಿದ್ದಾರೆ.
ಅಂದ ಹಾಗೆ ಯೋಗಿ ಆದಿತ್ಯನಾಥ್ ಅವರಿಗೆ ಪ್ರಾಣಿಗಳು ಅದರಲ್ಲೂ ಮುಖ್ಯವಾಗಿ ಗೋವುಗಳ ಮೇಲೆ ವಿಶೇಷ ಪ್ರೀತಿ. ಗೋರಖ್‌ಪುರಕ್ಕೆ ಭೇಟಿ ನೀಡಿದಾಗಲೆಲ್ಲಾ ಅಲ್ಲಿರುವ ಗೋಶಾಲೆಗೆ ಭೇಟಿ ನೀಡಿ ಹಸುಗಳಿಗೆ ಬೆಲ್ಲ ಹಾಗೂ ಇತರ ಆಹಾರಗಳನ್ನು ತಮ್ಮ ಕೈಯಾರೆ ನೀಡುತ್ತಾರೆ. ತಮ್ಮ ಪ್ರೀತಿಯ ಶ್ವಾನಗಳನ್ನೂ ಮುದ್ದಾಡುವ ಫೋಟೋಗಳೂ ಇದಾಗಲೇ ವೈರಲ್ ಆಗಿವೆ.