ಭಾರತೀಯ ಜನತಾ ಪಕ್ಷವು ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಸಲೀಸಾಗಿ ಬಹುಮತದ ಗಡಿ ದಾಟಿದೆ. ತನ್ನ ಪಕ್ಷದ ಗೆಲುವಿನ ಬಗ್ಗೆ ಮಾತಾನಾಡಿರುವ ಮಥುರಾದ ಬಿಜೆಪಿ ಸಂಸದೆ ಹೇಮಾ ಮಾಲಿನಿ, ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬುಲ್ಡೋಜರ್ ಎದುರು ಯಾವುದೂ ನಿಲ್ಲುವುದಿಲ್ಲ, ಅದು ಸೈಕಲ್ ಸಹ ಆಗಿರಬಹುದು(ಎಸ್‌ಪಿ ಪಕ್ಷದ ಚಿಹ್ನೆ) ಅಥವಾ ಬೇರೆ ಏನಾದರೂ ಆಗಿರಬಹುದು ಎಂದು ಟಾಂಗ್ ಕೊಟ್ಟಿದ್ದಾರೆ. ಬಿಜೆಪಿ ಕಾರ್ಯಕರ್ತರು ಉತ್ತರ ಪ್ರದೇಶದ ಪ್ರತಿಯೊಂದು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದಿರುವ ನಟಿ ಕಮ್ ರಾಜಕಾರಣಿ ಹೇಮಾಮಾಲಿನಿ ಜನತೆಗೆ ಧನ್ಯವಾದ ತಿಳಿಸಿದ್ದಾರೆ.
ನಮ್ಮ ಸರ್ಕಾರ ರಚನೆಯಾಗುತ್ತದೆ ಎಂದು ನಮಗೆ ಮೊದಲೇ ತಿಳಿದಿತ್ತು. ನಮ್ಮ ಪ್ರತಿಯೊಂದು ಕೆಲಸ ಅಭಿವೃದ್ಧಿಯ ಪರವಾಗಿದೆ. ಅದಕ್ಕಾಗಿಯೇ ಮತದಾರರು ನಮ್ಮನ್ನು ನಂಬುತ್ತಾರೆ ಎಂದಿದ್ದಾರೆ.
ಬುಲ್ಡೋಜರ್ ಮುಂದೆ ಬೇರೆ ಯಾವುದು ಬರೋಕೆ ಸಾಧ್ಯವಿಲ್ಲ. ಒಂದು ನಿಮಿಷದಲ್ಲಿ ಎಲ್ಲವನ್ನೂ ಮಲಗಿಸುವ ತಾಕತ್ ಬುಲ್ಡೋಜರ್ಗಿದೆ, ಅದು ಸೈಕಲ್ ಆಗಿರಬಹುದು ಅಥವಾ ಬೇರೆ ಏನಾದರೂ ಆಗಿರಬಹುದು ಎಂದು ಪ್ರತಿಪಕ್ಷಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಅಂದಹಾಗೇ ಯೋಗಿ ಸರ್ಕಾರದಲ್ಲಿ ಬುಲ್ಡೋಜರ್ ಮಹತ್ವ ಪಡೆದಿದೆ. ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭೂಮಿ ಮತ್ತು ಆಸ್ತಿಗಳನ್ನು ತೆರವು ಮಾಡಲು ಯೋಗಿ ಆದಿತ್ಯನಾಥ್ ಸರ್ಕಾರ ಕೈಗೊಂಡ ಕ್ರಮವನ್ನು ಈ ಪದದ ಮೂಲಕ ಉಲ್ಲೇಖಿಸಲಾಗುತ್ತದೆ.