ಕಾನ್ಪುರ್: ಸುಗಂಧ ದ್ರವ್ಯ ಉದ್ಯಮಿ ಪಿಯುಷ್ ಜೈನ್ ಮನೆ ಮೇಲೆ ಐಟಿ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈನ್ ನನ್ನು 14 ದಿನ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.
ಜೈನ್ ಮನೆಯಲ್ಲಿ 250 ಕೋಟಿ ರೂಪಾಯಿ ನಗದು, 25 ಕೆಜಿ ಚಿನ್ನಾಭರಣ, 600 ಕೆಜಿ ಶ್ರೀಗಂಧದ ಎಣ್ಣೆ ಜಪ್ತಿ ಮಾಡಲಾಗಿತ್ತು. ಉತ್ತರ ಪ್ರದೇಶದ ಕಾನ್ಪುರದಲ್ಲಿರುವ ಪಿಯುಷ್ ಜೈನ್ ಮನೆ ಮೇಲೆ ನಡೆದ ದಾಳಿ ವೇಳೆ ಕಂಡು ಬಂದ ನಗದು, ಚಿನ್ನ ಕಂಡು ದೇಶದ ಜನ ಬೆರಗಾಗಿದ್ದರು.
ಪಾನ್ ಮಸಾಲ ಮತ್ತು ಸುಗಂಧ ದ್ರವ್ಯಗಳ ವಹಿವಾಟು ನಡೆಸುತ್ತಿದ್ದ ಜೈನ್ ಮನೆಯಲ್ಲಿನ ಹಣವನ್ನು 19 ನಗದು ಎಣಿಕೆ ಯಂತ್ರಗಳ ಮೂಲಕ ಸತತ 15 ಗಂಟೆಗೂ ಅಧಿಕ ಕಾಲ ಎಣಿಸಲಾಗಿತ್ತು. ಸರಕು ಮತ್ತು ಸೇವಾ ತೆರಿಗೆ ಬೇಹುಗಾರಿಕೆ ವಿಭಾಗದ ನೇತೃತ್ವದಲ್ಲಿ ತನಿಖಾ ತಂಡದಿಂದ ಸಂಘಟಿತ ದಾಳಿ ನಡೆಸಲಾಗಿತ್ತು. ಆತನನ್ನು 14 ದಿನ ಕಸ್ಟಡಿಗೆ ವಹಿಸಲಾಗಿದೆ.
ಸೋಮವಾರ ಸಂಜೆಯವರೆಗೆ ಒಟ್ಟು ಲೆಕ್ಕಕ್ಕೆ ಸಿಗದ ಸುಮಾರು 250 ಕೋಟಿ ರೂ. ನಗದು ಪತ್ತೆಯಾಗಿದ್ದು, ಇದು ಸಿಬಿಐಸಿ ಅಧಿಕಾರಿಗಳು ವಶಪಡಿಸಿಕೊಂಡ ಅತಿ ದೊಡ್ಡ ನಗದು ಪ್ರಕರಣ ಆಗಿದೆ.