ಉತ್ತರಪ್ರದೇಶದಲ್ಲಿ ನಡೆದ ಘಟನೆಯೊಂದರಲ್ಲಿ ವಿವಾಹದ ಸಮಯದಲ್ಲಿಯೇ ವಧು ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ಅದೇ ಮುಹೂರ್ತದಲ್ಲಿ ವಧುವಿನ ಸಹೋದರಿಯನ್ನು ವರ ಮದುವೆಯಾಗಿದ್ದಾನೆ.
ಇಟವಾ ಜಿಲ್ಲೆಯ ಸನಾದ್ಪುರದಲ್ಲಿ ಘಟನೆ ನಡೆದಿದೆ. ಸ್ಥಳೀಯ ನಿವಾಸಿ ಮನೋಜ್ ಕುಮಾರ್ ಜೊತೆಗೆ ಸುರಭಿ ಮದುವೆ ನಿಗದಿಯಾಗಿತ್ತು.
ಹಿಂದೂ ವಿವಾಹ ವಿಧಿ ವಿಧಾನಗಳ ಭಾಗವಾಗಿ ಹಾರ ಬದಲಿಸಿಕೊಂಡ ನಂತರ ಸುರಭಿ ವೇದಿಕೆಯಲ್ಲಿ ಕುಸಿದು ಬಿದ್ದಿದ್ದಾಳೆ. ತಪಾಸಣೆಯ ನಂತರ ವೈದ್ಯರು ಬಂದು ನೋಡಿದ್ದು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮದುವೆಯ ವೇಳೆಯಲ್ಲೇ ಭಾರಿ ಹೃದಯ ಸ್ತಂಭನದಿಂದ ಸುರಭಿ ಸಾವನ್ನಪ್ಪಿದ್ದಾಳೆ.
ವಧು, ವರರ ಕುಟುಂಬದವರು ವಧುವಿನ ಸಹೋದರಿಗೆ ಮನೋಜ್ ಕುಮಾರ್ ಜೊತೆಗೆ ಮದುವೆ ಮಾಡಲು ನಿರ್ಧರಿಸಿದ್ದು, ಮದುವೆ ನೆರವೇರಿದೆ. ಮದುವೆ ಸಮಾರಂಭವನ್ನು ಮುಂದುವರೆಸಲಾಗಿದೆ.
ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನಮಗೆ ತೋಚಲಿಲ್ಲ. ಎರಡೂ ಕುಟುಂಬದವರು ಒಟ್ಟಿಗೆ ಕುಳಿತು ತಂಗಿ ನಿಶಾ ವರನನ್ನು ಮದುವೆಯಾಗಲಿ ಎಂದು ಸಲಹೆ ನೀಡಿದರು. ಚರ್ಚೆಯ ಬಳಿಕ ಎರಡೂ ಕುಟುಂಬದವರು ಒಪ್ಪಿಗೆ ಸೂಚಿಸಿದರು ಎಂದು ಮೃತ ಸುರಭಿ ಅವರ ಸಹೋದರ ಸೌರಭ್ ತಿಳಿಸಿದ್ದಾನೆ.
ಮದುವೆ ನಡೆಯುವಾಗ ಸುರಭಿ ಮೃತದೇಹವನ್ನು ಬೇರೆ ರೂಮ್ ನಲ್ಲಿ ಇರಿಸಲಾಗಿತ್ತು. ಮದುವೆಯ ನಂತರ ಬರಾತ್ ಹೊರಡು ಹೋದಾಗ ಸುರಭಿಯ ಅಂತ್ಯಕ್ರಿಯೆ ವಿಧಾನಗಳನ್ನು ನೆರವೇರಿಸಲಾಗಿದೆ. ಸುರಭಿ ಅವರ ಚಿಕ್ಕಪ್ಪ ಅಜಾಬ್ ಸಿಂಗ್, ಇದು ನಮ್ಮ ಕುಟುಂಬಕ್ಕೆ ಕಠಿಣವಾದ ಸಮಯವಾಗಿತ್ತು. ಒಬ್ಬ ಮಗಳು ಮದುವೆಯಾಗುವಾಗಲೇ ಸಾವನ್ನಪ್ಪಿ ಆಕೆಯ ಮೃತದೇಹವನ್ನು ಕೋಣೆಯಲ್ಲಿಟ್ಟು, ಇನ್ನೊಬ್ಬ ಮಗಳನ್ನು ಮದುವೆ ಮಾಡಿದೆವು. ಇಂತಹ ಘಟನೆಗೆ ನಾವು ಎಂದೂ ಸಾಕ್ಷಿಯಾಗಿರಲಿಲ್ಲ. ಒಂದೆಡೆ ಸಾವಿನ ದುಃಖ, ಮತ್ತೊಂದೆಡೆ ಮದುವೆಯ ಸಂತೋಷ. ಗೊಂದಲದಲ್ಲೇ ಮದುವೆ ಮಾಡಿದೆವು ಎಂದು ಹೇಳಿದ್ದಾರೆ.
ಈ ವರ್ಷದ ಮಾರ್ಚ್ ನಲ್ಲಿ ಒಡಿಶಾದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು, ಯುವ ವಧು ಹೃದಯಸ್ತಂಭನದಿಂದ ಸಾವನ್ನಪ್ಪಿದ್ದರು.