ಕೆಲ ದಿನಗಳ ಹಿಂದಷ್ಟೇ ಉತ್ತರ ಪ್ರದೇಶದ ಪ್ರತಾಪ್ಘರ್ ಜಿಲ್ಲೆಯಲ್ಲಿ ವರ ಕುಡಿದು ಬಂದ ಎಂಬ ಕಾರಣಕ್ಕೆ ವಧು ಆತನನ್ನ ತಿರಸ್ಕರಿದ ಘಟನೆ ವರದಿಯಾಗಿತ್ತು. ಇದೀಗ ಉತ್ತರ ಪ್ರದೇಶದ ಇನ್ನೊಂದು ಜಿಲ್ಲೆಯಲ್ಲಿ ಇಂತಹದ್ದೇ ಮತ್ತೊಂದು ಪ್ರಕರಣ ವರದಿಯಾಗಿದೆ.
ಬಲಿಯಾ ಜಿಲ್ಲೆಯಲ್ಲಿ ಜೂನ್ 5ರಂದು ಮದುವೆಯೊಂದು ನಿಶ್ಚಯವಾಗಿತ್ತು. ಮದುವೆ ದಿನದಂದು ದಿಬ್ಬಣ ಸಮೇತ ಬಂದ ವರ ಬಾಯಲ್ಲಿ ಗುಟ್ಕಾ ಹಾಕಿದ್ದ ಎಂಬ ಕಾರಣಕ್ಕೆ ಈತನನ್ನ ಮದುವೆಯಾಗಲು ವಧು ಒಲ್ಲೆ ಎಂದಿದ್ದಾಳೆ.
ಇನ್ನು ಈ ವಿಚಾರವಾಗಿ ಮಾತನಾಡಿದ ಮಣಿಯರ್ ಪೊಲೀಸ್ ಅಧಿಕಾರಿ ಶೈಲೇಂದ್ರ ಸಿಂಗ್, ಮಿಶ್ರೌಲಿ ಜಿಲ್ಲೆಯ ವಧು ತನ್ನ ಪತಿಯಾಗುವವನು ಗುಟ್ಕಾ ಹಾಕಿಕೊಂಡಿದ್ದ ಎಂಬ ಕಾರಣಕ್ಕೆ ಮದುವೆಯನ್ನ ನಿರಾಕರಿಸಿದ್ದಾಳೆ. ಗಂಟೆಗಟ್ಟಲೇ ಪಂಚಾಯ್ತಿ ನಡೆಸಿದ ವಧು – ವರರ ಕುಟುಂಬಸ್ಥರು ಯುವತಿಯ ಮನವೊಲಿಸುವಲ್ಲಿ ವಿಫಲರಾದ್ರು. ಪರಿಣಾಮವಾಗಿ ಎರಡೂ ಕುಟುಂಬದವರು ಈವರೆಗೂ ವಿನಿಮಯ ಮಾಡಿಕೊಂಡಿದ್ದ ಉಡುಗೊರೆಯನ್ನ ಹಿಂದಿರುಗಿಸಲು ನಿರ್ಧರಿಸಿದ್ದಾರೆ ಎಂದು ಹೇಳಿದ್ರು.
ಇದು ಉತ್ತರ ಪ್ರದೇಶದಲ್ಲಿ ಒಂದೇ ವಾರದಲ್ಲಿ ನಡೆದ ಎರಡನೇ ಘಟನೆಯಾಗಿದೆ. ಕೆಲ ದಿನಗಳ ಹಿಂದಷ್ಟೇ 22 ವರ್ಷದ ವಧು, ವರ ಕುಡಿದುಕೊಂಡು ಬಂದು ತನ್ನೊಡನೆ ನೃತ್ಯ ಮಾಡಲು ಹೇಳಿದ ಎಂಬ ಕಾರಣಕ್ಕೆ ಮದುವೆಯನ್ನ ನಿರಾಕರಿಸಿದ್ದಳು.