ಉತ್ತರ ಪ್ರದೇಶದಲ್ಲಿ ಗಂಗಾ ನದಿಯಲ್ಲಿ ತೇಲಿ ಬಂದಿದ್ದ 21 ದಿನಗಳ ಹೆಣ್ಣು ಕಂದಮ್ಮನನ್ನ ಬಚಾವ್ ಮಾಡಿದ್ದ ಅಂಬಿಗ ಗುಲ್ಲು ಚೌಧರಿ ಉತ್ತರ ಪ್ರದೇಶ ಸರ್ಕಾರದಿಂದ ಪ್ರಶಂಸೆಗೆ ಪಾತ್ರರಾಗಿದ್ದರು. ಘಾಜಿಪುರ ಜಿಲ್ಲೆಯ ಗಂಗಾ ನದಿಯಲ್ಲಿ ಮರದ ಪೆಟ್ಟಿಗೆಯಲ್ಲಿ ನವಜಾತ ಶಿಶುವೊಂದು ತೇಲಿ ಬಂದಿತ್ತು. ಈ ಮಗುವನ್ನ ರಕ್ಷಿಸಿದ ಅಂಬಿಗನಿಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರದಿಂದ ಸೂಕ್ತ ಸೌಕರ್ಯಗಳನ್ನ ನೀಡೋದಾಗಿ ಆಶ್ವಾಸನೆ ನೀಡಿದ್ದರು.
ಬುಧವಾರ ಈ ವಿಚಾರವಾಗಿ ಮಾತನಾಡಿದ್ದ ಯುಪಿ ಸಿಎಂ ಯೋಗಿ ಆದಿತ್ಯನಾಥ್, ಗಂಗಾ ನದಿಯಲ್ಲಿ ರಕ್ಷಣೆಯಾಗಿದ್ದ ಹೆಣ್ಣು ಕಂದಮ್ಮಳ ಸಂಪುರ್ಣ ಜವಾಬ್ದಾರಿಯನ್ನ ಸರ್ಕಾರವೇ ನೋಡಿಕೊಳ್ಳಲಿದೆ ಎಂದು ಘೋಷಣೆ ಮಾಡಿದ್ದರು.
ಘಾಜಿಪುರದ ದಾದ್ರಿ ಘಾಟ್ನಲ್ಲಿರುವ ಅಂಬಿಗನ ನಿವಾಸಕ್ಕೆ ಗುರುವಾರ ಆಗಮಿಸಿದ್ದ ಜಿಲ್ಲಾ ಮ್ಯಾಜಿಸ್ಟ್ರೇಟ್ ಎಂಪಿ ಸಿಂಗ್ ಗುಲ್ಲು ಚೌಧರಿ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡಿದ್ದಾರೆ.
ಇನ್ನು ಈ ವಿಚಾರವಾಗಿ ಮಾತನಾಡಿದ ವಿಭಾಗೀಯ ಕಮಿಷನರ್ ದೀಪಕ್ ಅಗರ್ವಾಲ್, ಜಿಲ್ಲಾ ಮ್ಯಾಜಿಸ್ಟ್ರೇಟ್ ಖುದ್ದಾಗಿ ಚೌಧರಿ ನಿವಾಸಕ್ಕೆ ತೆರಳಿ ಆತನ ಆರ್ಥಿಕ ಸಂಕಷ್ಟದ ಬಗ್ಗೆ ಮಾಹಿತಿಯನ್ನ ಕಲೆ ಹಾಕಿದ್ದಾರೆ. ಈ ವೇಳೆ ಚೌಧರಿ ಸ್ವಂತ ಮನೆಯನ್ನ ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಹಾಗಾಗಿ ಅವರಿಗೆ ವಸತಿ ಯೋಜನೆಯಡಿಯಲ್ಲಿ ಯಾವುದೇ ಪ್ರಯೋಜನ ನೀಡಲು ಸಾಧ್ಯವಿಲ್ಲ. ಆತ ಜೀವನೋಪಾಯಕ್ಕಾಗಿ ದೋಣಿ ನಡೆಸುತ್ತಾನೆ ಎಂದು ತಿಳಿದು ಬಂದ ಕಾರಣ ಆತನಿಗೆ ದೋಣಿಯನ್ನ ಕೊಡಿಸಲು ನಿರ್ಧರಿಸಿದ್ದೇವೆ ಎಂದು ಹೇಳಿದ್ರು.
ಚೌಧರಿ, ಅಧಿಕಾರಿಗಳ ಬಳಿ ತಮ್ಮ ಮನೆಗೆ ಕಾಂಕ್ರೀಟ್ ರಸ್ತೆಯ ಸೌಲಭ್ಯಕ್ಕಾಗಿ ಮನವಿ ಮಾಡಿದ್ದಾರೆ, ಹೀಗಾಗಿ ಶೀಘ್ರದಲ್ಲೇ ಈ ವ್ಯವಸ್ಥೆ ಮಾಡಿಕೊಡೋದಾಗಿ ಅಧಿಕಾರಿಗಳು ಆಶ್ವಾಸನೆ ನೀಡಿದ್ದಾರೆ.