ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯನ್ನು ಇಂದು ಬಿಡುಗಡೆ ಮಾಡಿದೆ. ಇಂದು ಕಾಂಗ್ರೆಸ್ 125 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು ಇದರಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಸಮಾಜವಾದಿ ಪಕ್ಷ ತೊರೆದು ಕಾಂಗ್ರೆಸ್ ಸೇರಿರುವ ಪಂಖುರಿ ಪಾಠಕ್ ಹೆಸರೂ ಸೇರಿದೆ.
ಕಾಂಗ್ರೆಸ್ ನಾಯಕಿ ಪಂಖುರಿ ಪಾಠಕ್ ಅವರು ನೋಯ್ಡಾದಿಂದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ. ಅವರ ಮೇಲೆ ನಂಬಿಕೆ ಇಟ್ಟು ಕಾಂಗ್ರೆಸ್ ಟಿಕೆಟ್ ನೀಡಿದೆ. ಟಿಕೆಟ್ ಸಿಕ್ಕ ಮೇಲೆ ಪಂಖೂರಿ ಪಾಠಕ್, ಪ್ರಿಯಾಂಕಾ ಗಾಂಧಿ ವಾದ್ರಾ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾನು ಹೆಣ್ಣು, ನಾನು ಹೆಣ್ಣು ಮಗುವಿನ ತಾಯಿ. ನನ್ನ ಈ ಹೋರಾಟ ಭಾರತದ ಎಲ್ಲ ಹೆಣ್ಣುಮಕ್ಕಳಿಗೆ ಸಮರ್ಪಿತವಾಗಿದೆ. ನನ್ನನ್ನು ನೋಯ್ಡಾದಿಂದ ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕಾಗಿ ಪ್ರಿಯಾಂಕಾ ದೀದಿಗೆ ಧನ್ಯವಾದಗಳು ಎಂದು ಟ್ವೀಟ್ ಮಾಡಿದ್ದಾರೆ.
ಆಶಾ ಸಿಂಗ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಆಶಾ ಸಿಂಗ್, ಉನ್ನಾವೊದಿಂದ ಸ್ಪರ್ಧಿಸಲಿದ್ದಾರೆ. ಚಿತ್ರಕೂಟದ ಮಾಣಿಕಪುರ 237ನೇ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ರಂಜನಾ ಭಾರತಿ ಲಾಲ್ ಪಾಂಡೆ ಸ್ಪರ್ಧೆ ನಡೆಸಲಿದ್ದಾರೆ.
ಸಲ್ಮಾನ್ ಖುರ್ಷಿದ್ ಪತ್ನಿ ಲೂಯಿಸ್ ಖುರ್ಷಿದ್ ಅವರಿಗೆ ಫರೂಕಾಬಾದ್ ನಿಂದ ಟಿಕೆಟ್ ನೀಡಲಾಗಿದೆ. ಕಾನ್ಪುರದ ಬಿಲಹೌರ್ನಿಂದ ಕಾಂಗ್ರೆಸ್ ಉಷಾ ರಾಣಿ ಕೋರಿ ಅವರನ್ನು ಕಣಕ್ಕಿಳಿಸಿದೆ. ಮೀರತ್ ಹಸ್ತಿನಾಪುರದಿಂದ ಅರ್ಚನಾ ಗೌತಮ್ ಮತ್ತು ಕಿಥೋರ್ನಿಂದ ಬಬಿತಾ ಗುರ್ಜರ್ಗೆ ಟಿಕೆಟ್ ನೀಡಿದೆ.
ನಮ್ಮ ಅಭ್ಯರ್ಥಿಗಳ ಪಟ್ಟಿ ವಿಶೇಷವಾಗಿದೆ. ಶೇಕಡಾ 40ರಷ್ಟು ಮಹಿಳೆಯರು,ಶೇಕಡಾ 40ರಷ್ಟು ಯುವಕರಿಗೆ ಈ ಬಾರಿ ಸ್ಥಾನ ನೀಡಲಾಗಿದೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.