ಕೊರೋನಾದ ನಡುವೆಯು ಉತ್ತರ ಪ್ರದೇಶದಲ್ಲಿ ಚುನಾವಣೆ ನಡೆಯುತ್ತಿದೆ. ಈಗಾಗ್ಲೇ ರಾಜಕೀಯ ಪಕ್ಷಗಳ ರ್ಯಾಲಿ ಹಾಗೂ ಸಾರ್ವಜನಿಕ ಸಭೆಗಳಿಗೆ ನಿಷೇಧ ಏರಿರುವ ಚುನಾವಣೆ ಆಯೋಗ ಚುನಾವಣೆ ಪ್ರಚಾರಕ್ಕೆ ಹೊಸ ಪರಿಹಾರ ನೀಡಿದೆ. ಹೌದು ಚುನಾವಣೆಗೂ ಮುನ್ನ ಸರ್ಕಾರಿ ಒಡೆತನದ ಮಾಧ್ಯಮಗಳಾದ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ ಮಾಡಬಹುದು ಎಂದು ಹೇಳಿದೆ. ಪ್ರತಿ ರಾಜಕೀಯ ಪಕ್ಷಕ್ಕೂ ಚುನಾವಣೆ ಪ್ರಚಾರ ಮಾಡಲು ಇಂತಿಷ್ಟು ಸಮಯವನ್ನು ನಿಗದಿ ಮಾಡಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಹೆಚ್ಚುವರಿ ಮುಖ್ಯ ಚುನಾವಣಾಧಿಕಾರಿ ಡಾ.ಬ್ರಹ್ಮ್ ದೇವ್ ರಾಮ್ ತಿವಾರಿ, ಎಲ್ಲಾ ರಾಜಕೀಯ ಪಕ್ಷಗಳಿಗೆ ಚುನಾವಣಾ ಪ್ರಸಾರಕ್ಕಾಗಿ ಒಟ್ಟು 1,798 ನಿಮಿಷಗಳನ್ನು ನೀಡಲಾಗಿದೆ ಎಂದಿದ್ದಾರೆ. ಚುನಾವಣೆಗೆ ಮುನ್ನ ದೂರದರ್ಶನ ಮತ್ತು ಆಕಾಶವಾಣಿಯಲ್ಲಿ ಯಾವ ರಾಜಕೀಯ ಪಕ್ಷಗಳ, ಎಷ್ಟು ಪ್ರಚಾರದ ಸಮಯವನ್ನು ನೀಡಬೇಕು ಎಂದು ಚುನಾವಣಾ ಸಮಿತಿ ಶುಕ್ರವಾರ ನಿರ್ಧರಿಸಿದೆ.
ದೂರದರ್ಶನ ಕೇಂದ್ರದಲ್ಲಿ 16 ದಿನಗಳ ಕಾಲ ಚುನಾವಣಾ ಪ್ರಚಾರದ ಕಾರ್ಯಕ್ರಮ ಪ್ರಸಾರವಾಗಲಿದೆ. ಫೆಬ್ರವರಿ 5 ರಿಂದ ಮಾರ್ಚ್ 5 ರವರೆಗೆ, ಮಧ್ಯಾಹ್ನ 1 ರಿಂದ 3 ಗಂಟೆಯವರೆಗೆ ಚುನಾವಣಾ ಪ್ರಚಾರವನ್ನು ಪ್ರಸಾರ ಮಾಡಲಾಗುತ್ತದೆ. ಹಾಗೆಯೇ, ಆಕಾಶವಾಣಿಯಲ್ಲಿ 14 ದಿನಗಳ ಪ್ರಸಾರವಿರುತ್ತದೆ, ಇದನ್ನು ಬೆಳಿಗ್ಗೆ 10 ರಿಂದ 11 ರ ವರೆಗೆ ಮತ್ತು ಸಂಜೆ 5:30 ರಿಂದ 7:10 ರವರೆಗೆ ಎರಡು ಪಾಳಿಗಳಲ್ಲಿ ಪ್ರಸಾರ ಮಾಡಲಾಗುತ್ತದೆ.
ಈ ವೇಳೆ ಪ್ರಸಾರಕ್ಕೆ ನಿಗದಿಪಡಿಸಿದ ಸಮಯದ ವಿವರ ನೀಡಿರುವ ಚುನಾವಣಾ ಇಲಾಖೆ, ಏಳು ಹಂತದ ಚುನಾವಣಾ ಪ್ರಸಾರ ನಡೆಯಲಿದೆ ಎಂದು ತಿಳಿಸಿದೆ. ದೂರದರ್ಶನ ಮತ್ತು ಆಕಾಶವಾಣಿ ಎರಡು ಸೇರಿ ಪಕ್ಷಗಳಿಗೆ ಪ್ರಚಾರದ ಸಮಯವನ್ನ ನೀಡಲಾಗಿದೆ. ಅದರಲ್ಲಿ ಬಿಜೆಪಿಗೆ 478 ನಿಮಿಷ, ಟಿಎಂಸಿ 90, ಬಿಎಸ್‌ಪಿ 307, ಸಿಪಿಐ 92 , ಸಿಪಿಐ(ಎಂ) 90, ಕಾಂಗ್ರೆಸ್ 151, ಎನ್‌ಸಿಪಿ 90, ಎನ್‌ಪಿಪಿ 90, RLD 107 ಮತ್ತು ಎಸ್ಪಿಗೆ 303 ನಿಮಿಷಗಳನ್ನು ನಿಗದಿಪಡಿಸಲಾಗಿದೆ.