ಉತ್ತರ ಪ್ರದೇಶದಲ್ಲೊಂದು ಆಘಾತಕಾರಿ ಘಟನೆ ನಡೆದಿದೆ. ಮೂರನೇ ತರಗತಿ ವಿದ್ಯಾರ್ಥಿ ಶಾಲೆಯಲ್ಲಿರುವುದನ್ನು ಮರೆತು ಶಿಕ್ಷಕರು ಹಾಗೂ ಸಿಬ್ಬಂದಿ ಬೀಗ ಹಾಕಿಕೊಂಡು ಹೋಗಿದ್ದಾರೆ.
ಲಕ್ನೋ ಜಿಲ್ಲೆಯ ಚಾರ್ಗವಾನ್ ಬ್ಲಾಕ್ ನ ಪರಮೇಶ್ವರ್ ಪುರ್ ನಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದ್ದು, ಶಾಲೆ ಬಿಡುವ ಸಮಯದಲ್ಲಿ ವಿದ್ಯಾರ್ಥಿ ನಿದ್ರೆಗೆ ಜಾರಿದಾಗ ಬೀಗ ಹಾಕಿಕೊಂಡು ಹೋಗಿದ್ದಾರೆ.
ಎಚ್ಚರವಾದಾಗ ಯಾರೂ ಇಲ್ಲದಿರುವುದನ್ನು ಕಂಡು ಬಾಲಕ ಗಾಬರಿಯಿಂದ ಅಳತೊಡಗಿದ್ದಾನೆ. ಆದರೆ ಈ ಶಾಲೆ ಗ್ರಾಮದಿಂದ ಹೊರಗೆ ಇದ್ದ ಕಾರಣ ಯಾರ ಗಮನಕ್ಕೂ ಬಂದಿಲ್ಲ.
ಅತ್ತ ಶಾಲೆ ಬಿಟ್ಟರೂ ಸಹ ಮಗ ಮನೆಗೆ ಬಾರದಿರುವುದನ್ನು ಕಂಡು ಪೋಷಕರು ಗಾಬರಿಯಾಗಿದ್ದು, ಪೊಲೀಸರಿಗೆ ದೂರು ನೀಡಿ ತಾವು ಕೂಡ ಹುಡಕಲು ಆರಂಭಿಸಿದ್ದಾರೆ.
ಅಂತಿಮವಾಗಿ ಅನುಮಾನದ ಮೇರೆಗೆ ಶಾಲೆ ಬಳಿ ಬಂದಾಗ ಏಳು ವರ್ಷದ ಬಾಲಕ ಅಳುತ್ತಿರುವುದು ಗಮನಕ್ಕೆ ಬಂದಿದೆ. ಅಷ್ಟೊತ್ತಿಗೆ ಪೊಲೀಸರು ಸಹ ಆಗಮಿಸಿದ್ದು ಶಾಲೆಯ ಬೀಗ ಹೊಡೆದು ಬಾಲಕನನ್ನು ರಕ್ಷಿಸಲಾಗಿದೆ.
ಒಟ್ಟು ಏಳು ಗಂಟೆಯವರೆಗೆ ಬಾಲಕ ಒಬ್ಬಂಟಿಯಾಗಿ ಶಾಲೆಯಲ್ಲಿ ಬಂಧಿಯಾಗಿದ್ದು, ಶಿಕ್ಷಕ ಹಾಗೂ ಸಿಬ್ಬಂದಿಯ ನಿರ್ಲಕ್ಷಕ್ಕೆ ಗ್ರಾಮಸ್ಥರು ಕಿಡಿ ಕಾರಿದ್ದಾರೆ.