ಮೀರತ್: ಉತ್ತರಪ್ರದೇಶದ ಮೀರತ್ ಜಿಲ್ಲೆಯಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ 15 ವರ್ಷದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಲಾಗಿದೆ.
ಪರೀಕ್ಷಿತ್ ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಘಟನೆ ನಡೆದಿದೆ. ಬಾಲಕಿ ತನ್ನ ಹೊಲದಿಂದ ತರಕಾರಿ ತರಲು ಹೋಗಿದ್ದ ಸಂದರ್ಭದಲ್ಲಿ ಅದೇ ಗ್ರಾಮದ ಯುವಕ ಆಕೆಯನ್ನು ಅಪಹರಿಸಿದ್ದಾನೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಯುವಕನ ನಿವಾಸದಲ್ಲಿ ಅರೆ ಪ್ರಜ್ಞಾವಸ್ಥೆಯಲ್ಲಿದ್ದ ಬಾಲಕಿಯನ್ನು ಪತ್ತೆ ಮಾಡಲಾಗಿದೆ.
ಸಂತ್ರಸ್ತ ಬಾಲಕಿಯ ತಾಯಿ ದೂರು ನೀಡಲು ಮುಂದಾದರೂ ಆರೋಪಿಯ ಕಡೆಯವರು ತಡೆದಿದ್ದಾರೆ. ಬಳಿಕ ಬಾಲಕಿಯ ಕುಟುಂಬ ಎಸ್ಎಸ್ಪಿ ಅಜಯ್ ಸಾಹ್ನಿ ಅವರನ್ನು ಭೇಟಿ ಮಾಡಿದ್ದಾರೆ. ನಂತರ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಸಾಹ್ನಿ ಸೂಚನೆ ಮೇರೆಗೆ ದೂರು ದಾಖಲಿಸಿಕೊಂಡು ಪರಾರಿಯಾಗಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪರೀಕ್ಷಿತ್ ಗಢ ಪೊಲೀಸ್ ಠಾಣೆ ಉಸ್ತುವಾರಿ ಆನಂದ ಮಿಶ್ರಾ ತಿಳಿಸಿದ್ದಾರೆ.